ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ಹಾಗೂ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿಚಾರದಲ್ಲಿ ನಡೆಯುತ್ತಿರುವ ವಿವಾದದ ಹಿನ್ನೆಲೆಯಲ್ಲಿ INDIA ಬಣ ಅಕ್ಟೋಬರ್ 2ರಿಂದ 'ಪ್ರಜಾಪ್ರಭುತ್ವ ಉಳಿಸಿ' (Save Democracy) ಪಾದಯಾತ್ರೆ ನಡೆಸುವುದಾಗಿ ಘೋಷಿಸಿದೆ.
ಬುಧವಾರ ನಡೆದ INDIA ಬಣದ ನಾಯಕರ ಜಂಟಿ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ ಘೋಷಣೆ ಮಾಡಿದರು. ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೂ INDIA ಬಣದ ನಾಯಕರು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಖರ್ಗೆ, "ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ" ಎಂದು ಹೇಳಿದ್ದು, SIR ಪ್ರಕ್ರಿಯೆ ಸೇರಿದಂತೆ ಚುನಾವಣಾ ಸಂಬಂಧಿತ ಹಲವು ವಿಚಾರಗಳ ಕುರಿತು ವಿರೋಧ ಪಕ್ಷಗಳ ಒಕ್ಕೂಟ ತನ್ನ ಆಕ್ಷೇಪಗಳನ್ನು ವ್ಯಕ್ತಪಡಿಸಿತು.
ಈ ಸಂದರ್ಭದಲ್ಲಿ INDIA ಬಣವು ಒಟ್ಟು ಆರು ಪ್ರಮುಖ ನಿರ್ಣಯಗಳನ್ನು ಕೈಗೊಂಡಿರುವುದಾಗಿ ತಿಳಿಸಲಾಯಿತು. ಅಕ್ಟೋಬರ್ 2ರಿಂದ ಆರಂಭವಾಗಲಿರುವ 'ಪ್ರಜಾಪ್ರಭುತ್ವ ಉಳಿಸಿ' ಪಾದಯಾತ್ರೆಯ ಮೂಲಕ ಚುನಾವಣಾ ಆಯೋಗದ ಮುಂದೆ ತಮ್ಮ ಬೇಡಿಕೆಗಳನ್ನು ಮಂಡಿಸಲು ಒಕ್ಕೂಟ ನಿರ್ಧರಿಸಿದೆ.ಅಕ್ಟೋಬರ್‌ನ ಎರಡನೇ ವಾರದಲ್ಲಿ INDIA ಬಣವು ರಾಷ್ಟ್ರಪತಿಯನ್ನು ಭೇಟಿಯಾಗಲು ಸಮಯ ಕೋರಲಿದೆ.


