ಚಿಕ್ಕೋಡಿ : ಉಪ ಲೋಕಾಯುಕ್ತ ನ್ಯಾಯಮೂರ್ತಿಗಳಾದ ನ್ಯಾ. ವೀರಪ್ಪ ಅವರು ಗುರುವಾರ(ಸೆ.24) ಚಿಕ್ಕೋಡಿಯ ಲಅಬಕಾರಿ, ಶಾಲಾ ಶಿಕ್ಷಣ ಇಲಾಖೆ,ಪದವಿಪೂರ್ವ ಶಿಕ್ಷಣ ಇಲಾಖೆ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಅಬಕಾರಿ ಇಲಾಖೆಯಿಂದ ಪರವಾನಿಗೆ ಪಡೆದ ಮದ್ಯದಂಗಡಿಗಳ ವಿವರ ಪಡೆದು ನಿಯಮಬಾಹಿರ ಮದ್ಯ ಮಾರಾಟ ಮಾಡುವ ಮದ್ಯದಂಗಡಿಗಳ ವಿರುದ್ಧ ಕೈಗೊಂಡ ಕ್ರಮಗಳ ಮಾಹಿತಿ ಪಡೆದು ಕಚೇರಿಗಳಲ್ಲಿನ ದಾಖಲೆಗಳನ್ನು ಪರಿಶೀಲಿಸಿದರು.

ಶಾಲಾ ಶಿಕ್ಷಣ ಇಲಾಖೆ ಕಚೇರಿಗೆ ಭೇಟಿ ನೀಡಿ ಶಾಲಾ ಮಕ್ಕಳಿಗೆ ವಿತರಿಸಿದ ಶೂ, ಶಾಲಾ ಕಟ್ಟಡಗಳ ವಿವರ, ಶಾಲೆಗಳಲ್ಲಿನ ಆಟದ ಮೈದಾನ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಲಭ್ಯಗಳ, ಬಿಸಿ ಊಟ, ಹಾಲು ವಿತರಣೆ ಕುರಿತು ವಿವರ ಪಡೆದುಕೊಂಡರು. ಬಿಸಿ ಊಟಕ್ಕೆ ಬಳಸಲಾಗುವ ಅಡುಗೆ ಅನೀಲ ಸಿಲಿಂಡರ್ ಶೇಖರಣೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲು ಸೂಚಿಸಿ ಶಾಲಾ ವಾಹನಗಳಲ್ಲಿ ಮಿತಿಗಿಂತ ಹೆಚ್ಚಿನ ಮಕ್ಕಳನ್ನು ಸಾಗಿಸದಂತೆ ಹಾಗೂ ಚಿಕ್ಕೋಡಿ ವಿಭಾಗದಲ್ಲಿನ ಶಾಲಾ ವಾಹನಗಳ ಪಿಟನ್ನೆಸ್ ಪ್ರಮಾಣ ಪತ್ರಗಳನ್ನು ಪರಿಶೀಲಿಸಿ ವರದಿ ನೀಡಲು ಸೂಚನೆ ನೀಡಿದರು.
ತದನಂತರ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಚಿಕ್ಕೋಡಿ ವಿಭಾಗದಲ್ಲಿರುವ ವಾಹನಗಳ ಸಂಖ್ಯೆ, ಶಾಲಾ ವಾಹನಗಳ ಸಂಖ್ಯೆ ಹಾಗೂ ಅವುಗಳಲ್ಲಿ ಪಿಟನೆಸ್ ಪ್ರಮಾಣ ಪತ್ರ, ವಿಮೆ ಹೊಂದಿರುವ ವಾಹನಗಳ ವಿವರಗಳ ಕುರಿತು ಮಾಹಿತಿ ಪಡೆದು ಫಿಟನೆಸ್ ಹೊಂದಿರದ ವಾಹನಗಳನ್ನು ವಶಕ್ಕೆ ಪಡೆಯಲು ಸೂಚನೆ ನೀಡಿದರು. ಕಚೇರಿಯಲ್ಲಿನ ಮದ್ಯವರ್ತಿಗಳ ಹಾವಳಿ ಕುರಿತು ವಿಚಾರಣೆ ನಡೆಸಿದ ಅವರು ಕಚೇರಿಯಲ್ಲಿನ ಸಿ.ಸಿ.ಕ್ಯಾಮೆರಾಗಳನ್ನು ಪರಿಶೀಲಿಸಲು ಸೂಚಿಸಿದರು ಸಹ ಸಿ.ಸಿ.ಕ್ಯಾಮೆರಾ ಮಾಹಿತಿ ಒದಗಿಸಲು ಹಿಂದೇಟು ಹಾಕಿದ್ದರಿಂದ ತೀವ್ರ ಸಿಡಿಮಿಡಿಗೊಂಡ ಅವರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವ ಎಚ್ಚರಿಕೆ ನೀಡಿ ಮದ್ಯವರ್ತಿಗಳ ವಿವರಗಳನ್ನು ಒದಗಿಸಲು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಕಾರ್ಯದರ್ಶಿಗಳಾದ ಅರವಿಂದ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಎನ್. ಶಿವಕುಮಾರ, ಲೋಕಾಯುಕ್ತ ಎಸ್.ಪಿ. ಪ್ರಸನ್ ದೇಸಾಯಿ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಉಪ ವಿಭಾಗಾಧಿಕಾರಿ ಎಸ್.ಎಸ್.ಸಂಪಗಾವಿ, ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ ರವಿ ಬಂಗಾರಪ್ಪನವರ, ತಹಶೀಲ್ದಾರ ಆರ್.ಆರ್.ಬುರ್ಲಿ, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ : ರಾಜು ಮುಂಡೆ


