ಬೆಂಗಳೂರು: ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮದಲ್ಲಿ (Recruitment Scam) ಕೆಪಿಎಸ್‌ಸಿಯ (KPSC) ಕೆಲ ಸದಸ್ಯರು ಹಾಗೂ ಸಿಬ್ಬಂದಿ ಭಾಗಿಯಾಗಿರುವ ಆರೋಪ ಕೇಳಿಬಂದ ಬೆನ್ನಲ್ಲೇ ಆಯೋಗದಲ್ಲಿ ತೀವ್ರ ಕೋಲಾಹಲ ಉಂಟಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಜ್ಞಾನೇಂದ್ರಕುಮಾರ್ ಗಂಗ್ವಾರ್ (Jnanendra Kumar) ಹೊರತುಪಡಿಸಿ ಇನ್ಯಾರಿಗೆಲ್ಲಾ ಇದರ ಲಾಭ ತಲುಪಿದೆ ಎಂಬ ಸಾರ್ವಜನಿಕ ಚರ್ಚೆ ಜೋರಾಗಿದೆ.
ಈಗಾಗಲೇ ಪದಚ್ಯುತಗೊಂಡಿರುವ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಹಾಗೂ ನಿವೃತ್ತ ಸದಸ್ಯೆ ಶಾಂತಾ ಹೊಸಮನಿ ಅವರ ಬಳಿಕ, ಇದೀಗ ಜ್ಞಾನೇಂದ್ರ ನೀಡಿರುವ ಹೇಳಿಕೆಯಿಂದಾಗಿ ಆಯೋಗದ ಇಬ್ಬರು ಹಾಲಿ ಸದಸ್ಯೆಯರ ಮೇಲೆಯೂ ತೂಗುಕತ್ತಿ ತೂಗಾಡುವಂತಾಗಿದೆ.
ಈ ಎಲ್ಲಾ ಗಂಭೀರ ಬೆಳವಣಿಗೆಗಳ ನಡುವೆ, ಆರೋಪಗಳ ಕುರಿತು ಚರ್ಚಿಸಲು ಹಂಗಾಮಿ ಅಧ್ಯಕ್ಷ ಡಾ. ಬಿ. ಪ್ರಭುದೇವ ಅವರು ಮಂಗಳವಾರ ಆಯೋಗದ ಮುಖ್ಯ ಸಭೆ ಕರೆದಿದ್ದು, ತೀವ್ರ ಕುತೂಹಲ ಮೂಡಿಸಿದೆ.
ಸಭೆಯ ಕುರಿತು ಮಾತನಾಡಿದ ಡಾ. ಬಿ. ಪ್ರಭುದೇವ ಅವರು, ಅಕ್ರಮದಲ್ಲಿ ಆಯೋಗದ ಕೆಲ ಸದಸ್ಯರ ಹೆಸರುಗಳು ಕೇಳಿಬಂದಿರುವುದು ಮಾಧ್ಯಮಗಳ ಮೂಲಕ ನನಗೂ ತಿಳಿದುಬಂದಿದ್ದು, ಇದರಿಂದ ತೀವ್ರ ಆಶ್ಚರ್ಯವಾಗಿದೆ ಎಂದು ತಿಳಿಸಿದ್ದಾರೆ.
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಚರ್ಚೆ ನಡೆಸಲು ಮಂಗಳವಾರ ಸಭೆ ಆಯೋಜಿಸುವಂತೆ ಕಾರ್ಯದರ್ಶಿಯವರಿಗೆ ಸೂಚನೆ ನೀಡಿದ್ದು, ಹಾಲಿ ಸದಸ್ಯರೆಲ್ಲರೂ ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.


