ನವದೆಹಲಿ: ದೇಶದ ಯುವಜನತೆಯನ್ನು (Gen Z) ಇನ್ನಷ್ಟು ಹತ್ತಿರದಿಂದ ತಲುಪುವ ಹಾಗೂ ಅವರೊಂದಿಗೆ ನಿರಂತರ ಸಂಪರ್ಕದಲ್ಲಿರುವ ಉದ್ದೇಶದಿಂದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಉಪಸ್ಥಿತಿಯನ್ನು ವಿಸ್ತರಿಸುತ್ತಿದೆ. ಇದರ ಭಾಗವಾಗಿ, ಇದೀಗ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯವು (MEA) ಜನಪ್ರಿಯ ಸಾಮಾಜಿಕ ಜಾಲತಾಣ 'ಸ್ನ್ಯಾಪ್‌ಚಾಟ್'ಗೆ (Snapchat) ಅಧಿಕೃತವಾಗಿ ಪದಾರ್ಪಣೆ ಮಾಡಿದೆ.
ಈ ಕುರಿತು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕೃತ ವಕ್ತಾರ ರಂಧೀರ್ ಜೈಸ್ವಾಲ್, "ನಾವು ಈಗ ಸ್ನ್ಯಾಪ್‌ಚಾಟ್‌ನಲ್ಲಿದ್ದೇವೆ! ಎಕ್ಸ್‌ಕ್ಲೂಸಿವ್ ಸ್ಟೋರಿಗಳು, ಕ್ಷಣಕ್ಷಣದ ಅಪ್‌ಡೇಟ್‌ಗಳು ಮತ್ತು ಆಕರ್ಷಕ ವಿಷಯಗಳಿಗಾಗಿ ನಮ್ಮನ್ನು ಸೇರಿಕೊಳ್ಳಿ ಹಾಗೂ ಸಂಪರ್ಕದಲ್ಲಿರಿ. ಲೆಟ್ಸ್ ಸ್ನ್ಯಾಪ್!" ಎಂದು ಬರೆದುಕೊಂಡಿದ್ದಾರೆ.


