ಭಾರತೀಯ ರೈಲ್ವೆ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲು ನಿರ್ಮಾಣವಾಗಿದ್ದು, ದೇಶದ ಮೊದಲ ಹೈಡ್ರೋಜನ್ ರೈಲು ಇಂದು ಹಳಿಗೆ ಇಳಿದಿದೆ. ಈ ಅತ್ಯಾಧುನಿಕ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಹರಿಯಾಣದ ಜಿಂದ್ ರೈಲು ನಿಲ್ದಾಣದಲ್ಲಿ ಚಾಲನೆ ನೀಡಿದ್ದಾರೆ.
ಈ ಯೋಜನೆಯೊಂದಿಗೆ ಹೈಡ್ರೋಜನ್ ರೈಲುಗಳನ್ನು ಯಶಸ್ವಿಯಾಗಿ ಸಂಚರಿಸುತ್ತಿರುವ ಕೆಲವೇ ದೇಶಗಳ ಪಟ್ಟಿಗೆ ಭಾರತವೂ ಸೇರ್ಪಡೆಗಿದೆ.
ಈ ರೈಲಿನ ವಿಶೇಷತೆ ಎಂದರೆ ಇದಕ್ಕೆ ಡೀಸೆಲ್ ಅಗತ್ಯವಿಲ್ಲ, ಮೇಲಿನ ವಿದ್ಯುತ್ ತಂತಿಗಳ ಅವಶ್ಯಕತೆಯೂ ಇಲ್ಲ. ಹೈಡ್ರೋಜನ್ ಇಂಧನದಿಂದ ಸಂಚರಿಸುವ ಈ ರೈಲು ಪರಿಸರಕ್ಕೆ ಹಾನಿಕಾರಕ ಹೊಗೆಯನ್ನು ಹೊರಸೂಸದೆ, ಕೇವಲ ನೀರಿನ ಆವಿ ಮತ್ತು ಅಲ್ಪ ಪ್ರಮಾಣದ ಉಷ್ಣ ಮಾತ್ರ ಹೊರಬಿಡುತ್ತದೆ.
ಹೈಡ್ರೋಜನ್ ರೈಲು ಹೇಗೆ ಕಾರ್ಯನಿರ್ವಹಿಸುತ್ತದೆ?
ಸಾಮಾನ್ಯ ವಿದ್ಯುತ್ ರೈಲುಗಳು ಮೇಲಿನ ಓವರ್ಹೆಡ್ ವಿದ್ಯುತ್ ಲೈನ್ಗಳಿಂದ ವಿದ್ಯುತ್ ಪಡೆಯುತ್ತವೆ. ಆದರೆ ಹೈಡ್ರೋಜನ್ ರೈಲು ತನ್ನೊಳಗೇ ವಿದ್ಯುತ್ ಉತ್ಪಾದಿಸಿಕೊಳ್ಳುತ್ತದೆ.
ರೈಲಿನಲ್ಲಿರುವ ಫ್ಯುಯೆಲ್ ಸೆಲ್ಗಳಲ್ಲಿ ಹೈಡ್ರೋಜನ್ ಮತ್ತು ವಾತಾವರಣದಲ್ಲಿರುವ ಆಮ್ಲಜನಕದ ನಡುವೆ ರಾಸಾಯನಿಕ ಕ್ರಿಯೆ ನಡೆಯುತ್ತದೆ.
ಈ ಕ್ರಿಯೆಯಿಂದ ನೇರವಾಗಿ ವಿದ್ಯುತ್ ಉತ್ಪತ್ತಿಯಾಗಿ ರೈಲಿನ ಮೋಟಾರ್ಗಳಿಗೆ ಶಕ್ತಿ ಒದಗಿಸುತ್ತದೆ. ಇದು ಹಳೆಯ ಸ್ಟೀಮ್ ಎಂಜಿನ್ನ ತತ್ವವನ್ನು ಹೋಲುತ್ತಿದ್ದರೂ, ಕಲ್ಲಿದ್ದಲು ಅಥವಾ ಡೀಸೆಲ್ ಬಳಕೆ ಇಲ್ಲದೆ ಸಂಪೂರ್ಣ ಹಸಿರು ಶಕ್ತಿಯಿಂದ ಕಾರ್ಯನಿರ್ವಹಿಸುತ್ತದೆ.
ಸುರಕ್ಷತೆಗೆ ವಿಶೇಷ ವ್ಯವಸ್ಥೆ
ಈ ರೈಲಿನಲ್ಲಿ ಅತ್ಯಾಧುನಿಕ ಬಹುಹಂತದ ಸುರಕ್ಷತಾ ವ್ಯವಸ್ಥೆ ಅಳವಡಿಸಲಾಗಿದೆ. ಹೈಡ್ರೋಜನ್ ಸೋರಿಕೆ, ಬೆಂಕಿ ಅಥವಾ ಹೊಗೆ ಉಂಟಾದರೆ ತಕ್ಷಣ ಪತ್ತೆಹಚ್ಚುವ ವ್ಯವಸ್ಥೆ ಇದರಲ್ಲಿ ಇದೆ.
ಮಾರ್ಗ ಮತ್ತು ವೇಳಾಪಟ್ಟಿ
ಭಾರತದ ಮೊದಲ ಹೈಡ್ರೋಜನ್ ರೈಲು (ರೈಲು ಸಂಖ್ಯೆ 74010) ಜಿಂದ್ ರೈಲು ನಿಲ್ದಾಣದಿಂದ ಬೆಳಿಗ್ಗೆ 7.40ಕ್ಕೆ ಹೊರಟು 9.40ಕ್ಕೆ ಸೋನಿಪತ್ ತಲುಪಲಿದೆ.
ಹಿಂತಿರುಗುವ ರೈಲು (ಸಂಖ್ಯೆ 74009) ಸೋನಿಪತ್ನಿಂದ ಬೆಳಿಗ್ಗೆ 10.40ಕ್ಕೆ ಹೊರಟು ಮಧ್ಯಾಹ್ನ 1.00ಕ್ಕೆ ಜಿಂದ್ ತಲುಪಲಿದೆ.89 ಕಿಲೋಮೀಟರ್ ದೂರದ ಈ ಮಾರ್ಗದಲ್ಲಿ ಜಿಂದ್ ಸಿಟಿ, ಪಾಂಡು ಪಿಂಡಾರಾ, ಲಲಿತ್ ಖೇರಾ, ಭಂಬೇವಾ, ಇಶಾಪುರ್ ಖೇರಿ, ಬುಟಾನಾ, ಖಾಂಡ್ರಾಯ್, ಗೊಹಾನಾ, ರಾಥ್ರಾ, ಲಾಥ್, ಮೋಹನಾ ಹರಿಯಾಣಾ ಹಾಗೂ ಬರ್ವಾಸ್ನಿ ಸೇರಿ 12 ನಿಲ್ದಾಣಗಳಲ್ಲಿ ರೈಲು ನಿಲುಗಡೆ ಮಾಡಲಿದೆ.


