ತುರುವೇಕೆರೆ : ಪಟ್ಟಣದ ವಿವೇಕಾನಂದ ವಿಶೇಷಚೇತನರ ಸಂಘದ ವತಿಯಿಂದ ತೆಂಗು ಬೆಳೆಗಾರರ ಸಂಘದ ಅಧ್ಯಕ್ಷ ಎನ್.ಆರ್.ಜಯರಾಮ್ ಅವರ ಜನ್ಮದಿನವನ್ನು ಆಚರಿಸಲಾಯಿತು.
ವಿಶೇಷಚೇತನರಿಂದ ಸನ್ಮಾನ ಸ್ವೀಕರಿಸಿ ಕೇಕ್ ಕತ್ತರಿಸಿ ಜನ್ಮದಿನ ಆಚರಿಸಿಕೊಂಡ ಎನ್.ಆರ್.ಜಯರಾಮ್ ಮಾತನಾಡಿ, ಬಹಳ ವರ್ಷಗಳಿಂದ ನನ್ನ ಮೇಲಿನ ಪ್ರೀತಿ, ಅಭಿಮಾನದಿಂದ ವಿಶೇಷಚೇತನರು ನನ್ನ ಜನ್ಮದಿನವನ್ನು ಅವರು ಆಚರಿಸುತ್ತಿದ್ದಾರೆ. ಅವರೊಡನೆ ಕೂಡಿ ಜನ್ಮದಿನ ಆಚರಿಸಿಕೊಳ್ಳುವುದು ಬಹಳ ಸಂತೋಷಕೊಡುತ್ತದೆ. ನಿಷ್ಕಲ್ಮಶ ಮನಸ್ಸಿಂದ ಹೃದಯದಿಂದ ಹಾರೈಸುತ್ತಾರೆ. ಸ್ವಾರ್ಥವಿಲ್ಲದ ಪ್ರೀತಿ ತುಂಬಿದ ಹಾರೈಕೆಗೆ ನಾನು ಸೋತಿದ್ದೇನೆ ಎಂದರು.
ಯಾವುದೇ ವ್ಯಕ್ತಿಗೂ ಹಣ, ಅಧಿಕಾರ ಎಂಬುದು ಶಾಶ್ವತವಲ್ಲ. ಹಣವಂತರಿಗೆ ದಾನ, ಧರ್ಮ ಮಾಡಲು ಕೈ ಬರುವುದಿಲ್ಲ. ಆದರೆ ಎಲ್ಲವನ್ನೂ ಕೂಡಿಡಲು ಭಗವಂತನೂ ಬಿಡುವುದಿಲ್ಲ. ದಾನ ಮಾಡದ ವ್ಯಕ್ತಿಯಿಂದ ಮತ್ತೊಂದು ರೂಪದಲ್ಲಿ ಹಣ ಖರ್ಚು ಮಾಡಿಸಿಯೇ ಮಾಡಿಸುತ್ತಾನೆ ಎಂದ ಅವರು, ತಾವು ಸಂಪಾದಿಸಿದ ಹಣದಲ್ಲಿ ಸ್ವಲ್ಪವಾದರೂ ಸಮಾಜಕ್ಕೆ, ಅಶಕ್ತರಿಗೆ ದಾನ ಮಾಡಬೇಕು. ದಾನ ಮಾಡುವುದೇ ಧರ್ಮ. ಪಾಪ ಪುಣ್ಯಗಳ ಲೆಕ್ಕವನ್ನು ಸಮಾಜದಲ್ಲಿ ಯಾರೂ ಬರೆದಿಡುವುದಿಲ್ಲ, ಆದರೆ ನಮ್ಮ ಭಗವಂತ ಲೆಕ್ಕದ ಪುಸ್ತಕದಲ್ಲಿ ನಾವು ಮಾಡುವ ಪಾಪ, ಪುಣ್ಯ, ದಾನ, ಧರ್ಮಗಳು ನೋಂದಣಿಯಾಗುತ್ತದೆ. ಅದಕ್ಕೆ ತಕ್ಕಂತೆ ಫಲವನ್ನು ದೇವರು ನೀಡುತ್ತಾನೆ ಎಂದರು.
ರೋಟರಿ ಕ್ಲಬ್ ನಿರ್ದೇಶಕ ಅಂಜನ್ ಕುಮಾರ್ ಮಾತನಾಡಿ, ಅಂಗವೈಕಲ್ಯತೆ ಶಾಪವಲ್ಲ, ಅಂಗವೈಕಲ್ಯತೆಯನ್ನು ಮೆಟ್ಟಿ ನಿಂತು ಏನಾದರೂ ಸಾಧಿಸುವ ಛಲವನ್ನು ನೀವು ಬೆಳೆಸಿಕೊಳ್ಳಬೇಕು. ಸೇವೆಯಲ್ಲಿ ಸದಾ ಮುಂದಿರುವ ಎನ್.ಆರ್.ಜಯರಾಮ್ ಅವರ ಮೇಲೆ ನೀವಿಟ್ಟಿರುವ ಪ್ರೀತಿ ಬಹಳ ವಿಶೇಷವಾದುದು. ತುರುವೇಕೆರೆ ರೋಟರಿ ಸಂಸ್ಥೆ ಸೇವೆಗೆ ಸದಾ ಸಿದ್ದವಿದ್ದು, ವಿಶೇಷಚೇತನರಿಗೆ ಯಾವುದೇ ರೀತಿಯ ಸೌಲಭ್ಯ, ಸಹಾಯ ಬೇಕಿದ್ದರೂ ಮಾಡಲು ರೋಟರಿ ಸಿದ್ದವಿದೆ ಎಂದರು.
ಈ ಸಂದರ್ಭದಲ್ಲಿ ವಿವೇಕಾನಂದ ವಿಶೇಷಚೇತನರ ಸಂಘಕ್ಕೆ ಎನ್.ಆರ್.ಜಯರಾಮ್ ಅವರು 60 ಸಾವಿರ ರೂ ಮೌಲ್ಯದ ಸೋಲಾರ್ ಲೈಟ್ ಹಾಗೂ ತೋಪೇಗೌಡನಪಾಳ್ಯದ ತಿಮ್ಮಪ್ಪ 20 ಸಾವಿರ ಮೌಲ್ಯದ ಕಂಪ್ಯೂಟರ್ ಹಾಗೂ ಪ್ರಿಂಟರ್ ಅನ್ನು ಕೊಡುಗೆಯಾಗಿ ನೀಡಿದರು. ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಉಮೇಶ್, ಪಪಂ ಮುಖ್ಯಾಧಿಕಾರಿ ಶ್ರೀನಾಥ್ ಬಾಬು, ಸಿಡಿಪಿಒ ಪುಟ್ಟಣ್ಣ, ವಿವೇಕಾನಂದ ವಿಶೇಷಚೇತನರ ಸಂಘದ ಅಧ್ಯಕ್ಷ ನಾಗರಾಜು, ಕಾರ್ಯದರ್ಶಿ ನಟೇಶ್, ಖಜಾಂಚಿ ಕೃಷ್ಣಮೂರ್ತಿ, ಎಂಆರ್.ಡಬ್ಲ್ಯೂ. ಯಮುನ, ಬೀದಿಬದಿ ವ್ಯಾಪಾರಿ ಸಂಘದ ಅಧ್ಯಕ್ಷ ಮಾರುತಿ ಸೇರಿದಂತೆ ವಿಶೇಷಚೇತನರು, ನಾಗರೀಕರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್

