ಶಿವಮೊಗ್ಗ : ನಗರದ (Shimoga) ಅಶೋಕ ರಸ್ತೆಯ ಬೇಡರ ಬೀದಿಯಲ್ಲಿ ಇರುವ ಯಲ್ಲಮ್ಮ ದೇವಸ್ಥಾನದ (Yellamma temple) ಗೋಡೆಯ ಮೇಲೆ ಕಿಡಿಗೇಡಿಗಳು ಅಸಭ್ಯ ಚಿಹ್ನೆಯನ್ನು ಬರೆದು ವಿಕೃತಿ ಮೆರೆದಿರುವ ಘಟನೆ ಬೆಳಕಿಗೆ ಬಂದಿದೆ.
ದೇಗುಲದ ಗೋಡೆಯ ಮೇಲೆ ಮಧ್ಯದ ಬೆರಳು ತೋರಿಸುವ ಚಿತ್ರವನ್ನು ಬಿಡಿಸಲಾಗಿದ್ದು, ಅದನ್ನು ಕಂಡ ಭಕ್ತರು (devotees) ಹಾಗೂ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪವಿತ್ರ ಸ್ಥಳದಲ್ಲಿ ಇಂತಹ ಅಸಭ್ಯ ವರ್ತನೆ ತೋರಿರುವುದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂಬ ಆರೋಪ ಕೇಳಿಬಂದಿದೆ.
ಈ ಘಟನೆಯ ಬಗ್ಗೆ ದೇವಸ್ಥಾನದ ಸಮಿತಿ ತೀವ್ರ ಖಂಡನೆ ವ್ಯಕ್ತಪಡಿಸಿದೆ. ದೇಗುಲದ ಗೌರವಕ್ಕೆ ಚ್ಯುತಿ ತರುವ ರೀತಿಯಲ್ಲಿ ವರ್ತಿಸಿದವರನ್ನು ಕೂಡಲೇ ಪತ್ತೆಹಚ್ಚಿ ಬಂಧಿಸಬೇಕು ಎಂದು ಸಮಿತಿ ಒತ್ತಾಯಿಸಿದೆ.
ಈ ವಿಕೃತ ಕೃತ್ಯದ ಹಿಂದೆ ಯಾರ ಕೈವಾಡ ಇದೆ ಎಂಬುದರ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಲಾಗಿದೆ. ಧಾರ್ಮಿಕ ಕೇಂದ್ರಗಳ ಮೇಲೆ ಇಂತಹ ಕೃತ್ಯಗಳು ಮರುಕಳಿಸದಂತೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು ಸಮಿತಿಯ ಪ್ರಮುಖ ಬೇಡಿಕೆಯಾಗಿದೆ.


