ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳನ್ನು ನಿಯಂತ್ರಿಸಲು ಸುಪ್ರೀಂ ಕೋರ್ಟ್ ಮಹತ್ವದ ಹೆಜ್ಜೆ ಇಟ್ಟಿದೆ. ಎಲ್ಲಾ ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ವೇಗ ನಿಯಂತ್ರಕ (Speed Governors), ವಾಹನ ಸ್ಥಳ ಪತ್ತೆ ಸಾಧನ (VLTD) ಮತ್ತು ತುರ್ತು ಪ್ಯಾನಿಕ್ ಬಟನ್‌ಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸರ್ವೋಚ್ಚ ನ್ಯಾಯಾಲಯವು ಬುಧವಾರ ತುರ್ತು ನಿರ್ದೇಶನ ನೀಡಿದೆ.
ಕೇಂದ್ರ ಮೋಟಾರು ವಾಹನ ನಿಯಮಗಳ (CMVR) ಕಟ್ಟುನಿಟ್ಟಾದ ಜಾರಿಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಕೆ.ವಿ. ವಿಶ್ವನಾಥನ್ ಅವರ ಪೀಠವು ಈ ಆದೇಶ ಹೊರಡಿಸಿದೆ.
ನಿಯಮ ಉಲ್ಲಂಘನೆಗೆ ದಂಡದ ಬಿಸಿ
ನ್ಯಾಯಾಲಯವು ಈ ಕೆಳಗಿನ ಪ್ರಮುಖ ಅಂಶಗಳನ್ನು ಒತ್ತಿ ಹೇಳಿದೆ:
ಫಿಟ್‌ನೆಸ್ ಸರ್ಟಿಫಿಕೇಟ್ ರದ್ದು: ವೇಗ ನಿಯಂತ್ರಕ ಮತ್ತು ಟ್ರ್ಯಾಕಿಂಗ್ ಸಾಧನ ಅಳವಡಿಸದ ವಾಹನಗಳಿಗೆ ಫಿಟ್‌ನೆಸ್ ಪ್ರಮಾಣಪತ್ರ ಅಥವಾ ಪರವಾನಗಿ (Permit) ನೀಡಬಾರದು.
ಭಾರಿ ದಂಡ: ನಿಯಮ ಉಲ್ಲಂಘಿಸುವ ವಾಹನ ಮಾಲೀಕರಿಗೆ ₹10,000 ವರೆಗೆ ಹಾಗೂ ನಿಯಮ ಪಾಲಿಸದ ತಯಾರಕರು ಅಥವಾ ಡೀಲರ್‌ಗಳಿಗೆ ₹1,00,000 ವರೆಗೆ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಅಲ್ಲದೆ, ಅಂತಹ ವಾಹನಗಳನ್ನು ಜಪ್ತಿ ಮಾಡುವ ಅಧಿಕಾರವನ್ನೂ ಸರ್ಕಾರ ಹೊಂದಿದೆ.
ತಯಾರಿಕಾ ಹಂತದಲ್ಲೇ ಅಳವಡಿಕೆ: ಹೊಸ ವಾಹನಗಳಲ್ಲಿ ತಯಾರಿಕಾ ಹಂತದಲ್ಲೇ ಈ ಸಾಧನಗಳನ್ನು ಪ್ರಿ-ಇನ್‌ಸ್ಟಾಲ್ ಮಾಡುವಂತೆ ಕಂಪನಿಗಳೊಂದಿಗೆ ಚರ್ಚಿಸಲು ಸಾರಿಗೆ ಸಚಿವಾಲಯಕ್ಕೆ (MoRTH) ಸೂಚಿಸಲಾಗಿದೆ.

