ಬೆಂಗಳೂರು: 2026-27ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಶಾಕ್ ನೀಡಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷಾ ಶುಲ್ಕವನ್ನು ಶೇ.5ರಷ್ಟು ಹೆಚ್ಚಿಸಿ ಆದೇಶ ಹೊರಡಿಸಲಾಗಿದೆ.
ಹೊಸದಾಗಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳು, ಖಾಸಗಿ ಅಭ್ಯರ್ಥಿಗಳು ಹಾಗೂ ಪುನರಾವರ್ತಿತ ಅಭ್ಯರ್ಥಿಗಳ ನೋಂದಣಿ ಮತ್ತು ಪರೀಕ್ಷಾ ಶುಲ್ಕದಲ್ಲಿ ಏರಿಕೆ ಮಾಡಲಾಗಿದೆ.
ಪ್ಥಥಮ ಬಾರಿಗೆ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕ 710 ರೂಪಾಯಿಯಿಂದ 746 ರೂಪಾಯಿಗೆ ಏರಿಕೆಯಾಗಿದೆ. ಈಗಾಗಲೇ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿರುವ ವಿದ್ಯಾರ್ಥಿಗಳೂ ಹೆಚ್ಚುವರಿಯಾಗಿ 36 ರೂಪಾಯಿ ಪಾವತಿಸಬೇಕಾಗುತ್ತದೆ.
ಇನ್ನು ಪುನರಾವರ್ತಿತ ಅಭ್ಯರ್ಥಿಗಳಿಗೂ ಪರೀಕ್ಷಾ ಶುಲ್ಕ ಹೆಚ್ಚಳವಾಗಿದೆ. ಒಂದು ವಿಷಯಕ್ಕೆ ಈ ಹಿಂದೆ 448 ರೂಪಾಯಿ ಶುಲ್ಕವಿದ್ದು, ಇದೀಗ 470 ರೂಪಾಯಿಗೆ ಏರಿಕೆಯಾಗಿದೆ.
ಎರಡು ವಿಷಯಗಳಿಗೆ 559 ರೂಪಾಯಿ ಇದ್ದ ಶುಲ್ಕವನ್ನು 587 ರೂಪಾಯಿಗೆ ಹೆಚ್ಚಿಸಲಾಗಿದೆ. ಇನ್ನು ಮೂರು ಅಥವಾ ಅದಕ್ಕಿಂತ ಹೆಚ್ಚಿನ ವಿಷಯಗಳಿಗೆ ಪರೀಕ್ಷೆ ಬರೆಯುವವರು ಈ ಹಿಂದೆ 752 ರೂಪಾಯಿ ಪಾವತಿಸುತ್ತಿದ್ದರು. ಇದೀಗ 790 ರೂಪಾಯಿ ಪಾವತಿಸಬೇಕಾಗಿದೆ.
ಇದರ ಜೊತೆಗೆ ಎಸ್‌ಎಸ್‌ಎಲ್‌ಸಿ ನೋಂದಣಿ ಶುಲ್ಕದಲ್ಲೂ ಏರಿಕೆ ಮಾಡಲಾಗಿದೆ. ಹೊಸದಾಗಿ ನೋಂದಣಿಯಾಗುವ ಖಾಸಗಿ ಅಭ್ಯರ್ಥಿಗಳ ನೋಂದಣಿ ಶುಲ್ಕವನ್ನು 248 ರೂಪಾಯಿಯಿಂದ 260 ರೂಪಾಯಿಗೆ ಹೆಚ್ಚಿಸಲಾಗಿದೆ. ಅಂದರೆ 12 ರೂಪಾಯಿ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗಿದೆ.


