ನವದೆಹಲಿ : ದೆಹಲಿಯ ಮಾಳವೀಯ ನಗರದಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಸಂಭವಿಸಿದ ಜೀವಹಾನಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತೀವ್ರ ಆಘಾತ ಮತ್ತು ಸಂತಾಪ ವ್ಯಕ್ತಪಡಿಸಿದ್ದಾರೆ.
ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಹಾಗೂ ಗಾಯಾಳುಗಳಿಗೆ ಪ್ರಧಾನಮಂತ್ರಿಯವರ ರಾಷ್ಟ್ರೀಯ ಪರಿಹಾರ ನಿಧಿಯಿಂದ (PMNRF) ಪ್ರಧಾನಿ ಮೋದಿ ಅವರು ತಕ್ಷಣದ ಆರ್ಥಿಕ ನೆರವನ್ನು ಘೋಷಿಸಿದ್ದಾರೆ.
ದೆಹಲಿಯ ಮಾಳವೀಯ ನಗರ ಪ್ರದೇಶದ ರೆಸ್ಟೋರೆಂಟ್ ಒಂದರಲ್ಲಿ ಬುಧವಾರ ಬೆಳಗ್ಗೆ ಸಂಭವಿಸಿದ ಭೀಕರ ಅಗ್ನಿ ಅನಾಹುತದಲ್ಲಿ ಕನಿಷ್ಠ 21 ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.
ದಕ್ಷಿಣ ದೆಹಲಿಯ ಹೌಜ್ ರಾಣಿ ಪ್ರದೇಶದಲ್ಲಿರುವ ಬಹುಮಹಡಿ ಕಟ್ಟಡದ 'ಲೆಮನ್ ಗ್ರೀನ್ ರೆಸ್ಟೋರೆಂಟ್'ನಲ್ಲಿ (Lemon Green Restaurant) ಈ ದುರಂತ ಸಂಭವಿಸಿದೆ. ಮೃತರ ಪೈಕಿ ಹಲವರು ವಿದೇಶಿ ಪ್ರಜೆಗಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬುಧವಾರ ಬೆಳಗ್ಗೆ ಸುಮಾರು 8.50ರ ಸುಮಾರಿಗೆ ಈ ಬೆಂಕಿ ಕಾಣಿಸಿಕೊಂಡಿದ್ದು, ಬೆಳಗ್ಗೆ 9.45ರ ಸುಮಾರಿಗೆ ದೆಹಲಿ ಅಗ್ನಿಶಾಮಕ ಸೇವೆಗೆ (DFS) ಮಾಹಿತಿ ಲಭಿಸಿದೆ.
ತಕ್ಷಣವೇ ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ. ಈ ಘಟನೆಯು ನೆಹರು ಪ್ಲೇಸ್ ಅಗ್ನಿಶಾಮಕ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ಅಗ್ನಿಶಾಮಕ ದಳದ ಆರಂಭಿಕ ಮಾಹಿತಿಯ ಪ್ರಕಾರ, ರೆಸ್ಟೋರೆಂಟ್‌ನ ಬೇಸ್‌ಮೆಂಟ್‌ನಲ್ಲಿ ಸಿಲುಕಿಕೊಂಡಿದ್ದ 37 ಜನರನ್ನು ಸಿಬ್ಬಂದಿ ಯಶಸ್ವಿಯಾಗಿ ರಕ್ಷಿಸಿದ್ದಾರೆ.
ಗಾಯಾಳುಗಳನ್ನು ಕ್ಯಾಟ್ಸ್ (CATS) ಆಂಬ್ಯುಲೆನ್ಸ್‌ಗಳ ಮೂಲಕ ತಕ್ಷಣವೇ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳದಲ್ಲಿ ಸದ್ಯ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

