ಮಾನ್ವಿ: ಯೋಗಾಭ್ಯಾಸವು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿದ್ದು ಆರೋಗ್ಯಕರ ದೇಹ ಮತ್ತು ಮನಸ್ಸನ್ನು ರೂಪಿಸಲು ಯೋಗ ಅತ್ಯಂತ ಪರಿಣಾಮಕಾರಿ ಸಾಧನವಾಗಿದೆ ಎಂದು ಶಾರದಾ ಶಿಕ್ಷಣ ಸಂಸ್ಥೆಯ ಉಪಪ್ರಾಚಾರ್ಯ ವೀರಭದ್ರಯ್ಯ ಹಿರೇಮಠ ಹೇಳಿದರು.
ಪಟ್ಟಣದ ಶಾರದಾ ಶಿಕ್ಷಣ ಸಂಸ್ಥೆಯ ಬಿ.ಎಡ್. ಕಾಲೇಜಿನಲ್ಲಿ ಪ್ರಶಿಕ್ಷಣಾರ್ಥಿಗಳಿಗಾಗಿ ಆಯೋಜಿಸಿದ್ದ ಒಂದು ದಿನದ ಯೋಗ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಶಿಕ್ಷಕರಾಗುವ ವಿದ್ಯಾರ್ಥಿಗಳು ಯೋಗವನ್ನು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡು ಮುಂದಿನ ಪೀಳಿಗೆಗೂ ಅದರ ಮಹತ್ವವನ್ನು ತಿಳಿಸಬೇಕು ಎಂದು ಕರೆ ನೀಡಿದರು.
ಶಿಬಿರದಲ್ಲಿ ಯೋಗ ಗುರು ಅನ್ನದಾನಯ್ಯ ಅವರು ಬೆಳಿಗ್ಗೆ 7ರಿಂದ 11 ಗಂಟೆಯವರೆಗೆ ತರಬೇತಿ ನಡೆಸಿ ವಿವಿಧ ಯೋಗಾಸನಗಳು ಪ್ರಾಣಾಯಾಮ ಹಾಗೂ ಧ್ಯಾನದ ವಿಧಾನಗಳನ್ನು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು. ನಂತರ ಯೋಗ ಎಂದರೇನು ಯೋಗದ ಹಂತಗಳು ಯೋಗಾಭ್ಯಾಸದ ಸೂಕ್ತ ಸಮಯ ಸಾತ್ವಿಕ ಆಹಾರದ ಮಹತ್ವ, ಧ್ಯಾನದ ವೈಜ್ಞಾನಿಕ ಹಿನ್ನೆಲೆ ಹಾಗೂ ಚಿತ್ತವೃತ್ತಿ ನಿರೋಧ ಎಂಬ ಯೋಗ ಸೂತ್ರದ ಅರ್ಥವನ್ನು ಸವಿಸ್ತಾರವಾಗಿ ವಿವರಿಸಿದರು. ಅಷ್ಟಾಂಗ ಯೋಗದ ಕುರಿತು ವಿಶೇಷ ಉಪನ್ಯಾಸ ನೀಡಿ, ಪ್ರಶಿಕ್ಷಣಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು. ಆಹಾರ ಪದ್ಧತಿಯಲ್ಲಿ ಸಾತ್ವಿಕ, ರಾಜಸಿಕ ಹಾಗೂ ತಾಮಸಿಕ ಆಹಾರಗಳ ವೈಶಿಷ್ಟ್ಯ ಮತ್ತು ಆರೋಗ್ಯದ ಮೇಲಿನ ಪರಿಣಾಮಗಳ ಬಗ್ಗೆಯೂ ಮಾಹಿತಿ ನೀಡಿದರು.
ಉಪನ್ಯಾಸಕರಾದ ಆನಂದ ಹರನಹಳ್ಳಿ ಮಾತನಾಡಿ ಸದೃಢ ದೇಹದಲ್ಲಿ ಸದೃಢ ಮನಸ್ಸು ಬೆಳೆಯಲು ಯೋಗಾಭ್ಯಾಸ ಅತ್ಯಗತ್ಯ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪರಮೇಶ್ವರಪ್ಪ ಗೋಪಶೆಟ್ಟಿ ಮಾತನಾಡಿ ವೈಜ್ಞಾನಿಕವಾಗಿ ಸಾಬೀತಾಗಿರುವ ಯೋಗಾಭ್ಯಾಸವು ಅನೇಕ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳಿಗೆ ರಾಮಬಾಣವಾಗಿದ್ದು, ಪ್ರತಿಯೊಬ್ಬರೂ ಇದನ್ನು ಜೀವನಶೈಲಿಯ ಭಾಗವನ್ನಾಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಲಲಿತಾ ಪ್ರಾರ್ಥನಾ ಗೀತೆ ಹಾಡಿದರು. ಪೀರ್ ಮಹಮದ್ ಕಾರ್ಯಕ್ರಮ ನಿರೂಪಿಸಿದರು. ಪ್ರಶಿಕ್ಷಣಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು. ಕೊನೆಯಲ್ಲಿ ಯೋಗ ಗುರು ಅನ್ನದಾನಯ್ಯ ಅವರನ್ನು ಸನ್ಮಾನಿಸಲಾಯಿತು. ಬಿ.ಎಡ್. ಪ್ರಶಿಕ್ಷಣಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ಯೋಗ ಶಿಬಿರವನ್ನು ಯಶಸ್ವಿಗೊಳಿಸಿದರು.
ವರದಿ : ಆಂಜನೇಯ ನಸಲಾಪುರ


