ತುರುವೇಕೆರೆ : ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ತಾಲೂಕು ಘಟಕ, ಮಹಿಳಾ ಮತ್ತು ಯುವ ಘಟಕದ ಸಂಯುಕ್ತಾಶ್ರಯದಲ್ಲಿ ಮೇ 29 ರಂದು ಪಟ್ಟಣದ ಶ್ರೀ ಗುರುಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಬಸವ ಜಯಂತಿ, ವೀರಯೋಧರಿಗೆ ಬಲನೀಡುವುದಕ್ಕಾಗಿ ಸಾಮೂಹಿಕ ಇಷ್ಟಲಿಂಗ ಪೂಜಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಾಲ್ಲೂಕು ಅಧ್ಯಕ್ಷ ಎಸ್.ಎಂ. ಕುಮಾರಸ್ವಾಮಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ವರ್ಷವೂ ವಿಶ್ಚಗುರು ಬಸವೇಶ್ವರರ ಜಯಂತಿಯನ್ನು ಸಮಾಜದ ವತಿಯಿಂದ ಆಯೋಜಿಸಲಾಗಿದೆ. ಇದಲ್ಲದೆ ವಿಶೇಷವಾಗಿ ಪಹಲ್ಗಾಮ್ ನಲ್ಲಿ ಭಾರತೀಯ ನಾಗರೀಕರ ಹತ್ಯೆಗೈದ ಉಗ್ರರಿಗೆ ತಕ್ಕ ಶಾಸ್ತಿ ಮಾಡಲು ಆಪರೇಷನ್ ಸಿಂಧೂರ ಮೂಲಕ ಹಗಲು ರಾತ್ರಿ ಎನ್ನದೆ ಜೀವ ಪಣಕ್ಕಿಟ್ಟು ಹೋರಾಟ ನಡೆಸುತ್ತಿರವ ವೀರಯೋಧರಿಗೆ ಭಗವಂತ ಹೆಚ್ಚಿನ ಶಕ್ತಿ ನೀಡಬೇಕೆಂದು ಕೋರುತ್ತಾ ಸಾಮೂಹಿಕ ಇಷ್ಟಲಿಂಗ ಪೂಜೆಯನ್ನು ಏರ್ಪಡಿಸಲಾಗಿದೆ ಎಂದರು.
ಮೇ 29 ರಂದು ಬೆಳಿಗ್ಗೆ 7.30 ಕ್ಕೆ ಪ್ರಾರಂಭವಾಗುವ ಸಾಮೂಹಿಕ ಇಷ್ಟಲಿಂಗ ಪೂಜಾ ಕಾರ್ಯಕ್ರಮ ಹಾಗೂ ಧಾರ್ಮಿಕ ಸಭೆಯ ದಿವ್ಯ ಸಾನಿದ್ಯವನ್ನು ವಿರಕ್ತಮಠದ ಡಾ.ಶ್ರೀ ಕರಿವೃಷಭದೇಶೀಕೇಂದ್ರ ಶಿವಯೋಗೀಶ್ವರ ಮಹಾಸ್ವಾಮಿಗಳು, ಗೊಲ್ಲಹಳ್ಳಿ ಶ್ರೀ ಸಿದ್ಧಲಿಂಗೇಶ್ವರ ಮಹಾಸಂಸ್ಥಾನದ ಡಾ. ಶ್ರೀ ವಿಭವ ವಿದ್ಯಾಶಂಕರ ದೇಶೀಕೇಂದ್ರ ಮಹಾಸ್ವಾಮಿಗಳು ವಹಿಸಲಿದ್ದು, ಶಾದಕ ಎಂ.ಟಿ.ಕೃಷ್ಣಪ್ಪ ಅಧ್ಯಕ್ಷತೆ ಉದ್ಘಾಟಿಸಲಿದ್ದಾರೆ ಎಂದರು.
ವೀರಶೈವ ಲಿಂಗಾಯಿತ ಸಮುದಾಯ ಹಾಗೂ ಶ್ರೀ ಗುರುಸಿದ್ದರಾಮೇಶ್ವರ ಸಮುದಾಯ ಭವನದ ಅಭಿವೃದ್ದಿಗೆ ಅಪಾರ ಕೊಡುಗೆ ನೀಡಿರುವ ಮಾಜಿ ಶಾಸಕ ಮಸಾಲಾ ಜಯರಾಮ್ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಗುವುದು ಎಂದ ಅವರು, ಮಹಾಸಭಾದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ರಾಜಶೇಖರ್, ಪ್ರಧಾನ ಕಾರ್ಯದರ್ಶಿ ನಟರಾಜ್ ಸಾಗರನಹಳ್ಳಿ, ಜಿಲ್ಲಾಧ್ಯಕ್ಷ ಪರಮೇಶ್ವರ್, ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಅಪ್ಪಾಜಪ್ಪ ಸೇರಿದಂತೆ ರಾಜ್ಯ, ಜಿಲ್ಲಾ, ತಾಲೂಕಿನ ವಿವಿಧ ಘಟಕಗಳ ಪದಾಧಿಕಾರಿಗಳು ಆಗಮಿಸಲಿದ್ದಾರೆ ಎಂದರು.
ಬವಸ ಜಯಂತಿ ಹಾಗೂ ಸಾಮೂಹಿಕ ಇಷ್ಟಲಿಂಗ ಪೂಜೆ ಕಾರ್ಯಕ್ರಮದಲ್ಲಿ ಎಲ್ಲಾ ಜಾತಿ ಸಮುದಾಯದ ಬಾಂದವರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕೋರಿದರು.
ಗೋಷ್ಠಿಯಲ್ಲಿ ಸಮುದಾಯದ ಮುಖಂಡರಾದ ಸುನಿಲ್ ಬಾಬು, ಹೆಡಗೀಹಳ್ಳಿ ವಿಶ್ವನಾಥ್, ಟಿ.ಪಿ. ಮಹೇಶ್, ಸಾ.ಶಿ.ದೇವರಾಜ್, ಶಂಕರಪ್ಪ, ಕೈಲಾಶ್, ಲೋಕೇಶ್, ನಟೇಶ್, ರಾಜೇಶ್ ಸೇರಿದಂತೆ ಸಮಾಜದ ಬಾಂದವರು ಉಪಸ್ಥಿತರಿದ್ದರು
ವರದಿ: ಗಿರೀಶ್ ಕೆ ಭಟ್