ಮಂಡ್ಯ : ಪಾಕಿಸ್ತಾನದಲ್ಲಿ ಅಡಗಿರುವ ಉಗ್ರರ ನೆಲೆಗಳ ಮೇಲೆ ಭಾರತ ದಾಳಿಮಾಡಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೇಂದ್ರ ಸರ್ಕಾರದ ಸೂಚನೆಯಂತೆ ಎಲ್ಲೆಡೆ ಅಣುಕು ಕವಾಯತು ಮಾಡಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದರು.
ಮದ್ದೂರು ಕಾಫಿ ಡೇ ಹತ್ತಿರದ ಗೆಜ್ಜಲಗೆರೆ ಹೆಲಿಪ್ಯಾಡ್ ನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರವು ನೀಡಿರುವ ಸಲಹೆಯಂತೆ ರಾಜ್ಯದಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ವಹಿಸಲಾಗುತ್ತಿದೆ.ಅಣೆಕಟ್ಟುಗಳ ಸುರಕ್ಷತೆಯ ದೃಷ್ಟಿಯಲ್ಲಿ ಎಲ್ಲೆಡೆ ಎಚ್ಚರಿಕೆ ನೀಡಲಾಗಿದೆ ಎಂದರು.
ಯಾವುದೇ ಕ್ಷಣದಲ್ಲಿ ವಿಕೋಪ ಪರಿಸ್ಥಿತಿ ಎದುರಾದರೂ ಅದನ್ನು ಸಮರ್ಥವಾಗಿ ಎದುರಿಸಲು ಸನ್ನದ್ಧರಾಗಿರುವಂತೆ ಸೂಚಿಸಲಾಗಿದೆ. ಮುಜರಾಯಿ ಇಲಾಖೆ ದೇವಾಲಯಗಳಲ್ಲಿ ವಿಶೇಷ ಪೂಜೆ ಮಾಡುವ ಬಗ್ಗೆ ಸಚಿವರಾದ ರಾಮಲಿಂಗಾರೆಡ್ಡಿಯವರು ನನ್ನೊಂದಿಗೆ ಚರ್ಚೆ ನಡೆಸಿ, ಕ್ರಮ ಕೈಗೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಇನ್ನು ಪಾಕಿಸ್ತಾನದ ಪ್ರಜೆಗಳನ್ನು ಗಡೀಡಿಪಾರು ಮಾಡಿಲ್ಲ ಎಂದು ಬಿಜೆಪಿ ನಾಯಕರ ಆರೋಪಕ್ಕೆ ಇದೇ ವೇಳೆ ಉತ್ತರಿಸಿದ ಸಿಎಂ, ಗಡೀಪಾರು ಮಾಡಲಾಗಿದೆ. ಮೈಸೂರಿನಲ್ಲಿ ಇರುವವರು ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಅಂಥವರು ಮಾತ್ರ ಉಳಿದುಕೊಂಡಿರುವುದು ಬಿಟ್ಟರೆ ಬಹುತೇಕ ಎಲ್ಲರೂ ಗಡೀಪಾರು ಆಗಿದ್ದಾರೆ, ಎಷ್ಟು ಜನ ಉಳಿದಿದ್ದಾರೆ ಎಂಬ ಮಾಹಿತಿ ಇಲ್ಲ ಎಂದು ಹೇಳಿದರು.
ಏ.22ರಂದು ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ಪಾಕ್ ಪೋಷಿತ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತ ಸೇನೆಯು ಪಾಕ್ಗೆ ನುಗ್ಗಿ ಉಗ್ರರ ಅಡುಗುತಾಣ, ಉಗ್ರರಿಗೆ ತರಬೇತಿ ನೀಡುವ ಕ್ಯಾಂಪ್ಗಳನ್ನು ಗುರಿಯಾಗಿಸಿ ರಣರೋಚಕವಾಗಿ ನಿರ್ದಿಷ್ಟ ದಾಳಿ ನಡೆಸಿದೆ. ಇದರ ಬೆನ್ನಲ್ಲೇ ಯುದ್ಧದ ಕಾರ್ಮೋಡ ಆವರಿಸಿದ್ದರಿಂದ ದೇಶಾದ್ಯಂತ ಹೈ ಅಲರ್ಟ್ ಗೆ ಕೇಂದ್ರ ಸೂಚಿಸಿದೆ.