————————————ಸಿಎಂ ಸಿದ್ದರಾಮಯ್ಯ ಅವರಿಂದ ಟ್ವೀಟ್ ಮೂಲಕ ಅಭಿನಂದನೆ
ಹಾಸನ: ಕನ್ನಡದ ಹೆಸರಾಂತ ಹಿರಿಯ ಸಾಹಿತಿ ಬಾನು ಮುಷ್ತಾಕ್ ಅವರು ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಆ ಮೂಲಕ ಬೂಕರ್ ಪ್ರಶಸ್ತಿ ಪಡೆದ ಕನ್ನಡದ ಮೊದಲ ಸಾಹಿತಿ ಎಂಬ ಹೆಗ್ಗಳಿಕೆಗೆ ಬಾನು ಮುಷ್ತಾಕ್ ಪಾತ್ರರಾಗಿದ್ದಾರೆ. ‘ಹಾರ್ಟ್ ಲ್ಯಾಂಪ್’ ಎಂಬ ಕೃತಿಗೆ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ. ಹಾಗಾಗಿ ಕರುನಾಡಿಗೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಒಲಿದಿದೆ. ಮಂಗಳವಾರ ಇಂಗ್ಲೆಂಡ್ನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಪ್ರಶಸ್ತಿಯು ಅಂದಾಜು 57.28 ಲಕ್ಷ ರೂ. ನಗದು ಒಳಗೊಂಡಿದೆ.
ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಹಿರಿಯ ಸಾಹಿತಿ ಬಾನು ಮುಷ್ತಾಕ್ ಅವರು ಮೂಲತಃ ಹಾಸನದವರು. ಇತ್ತೀಚೆಗೆ ಅಂದರೆ ಫೆಬ್ರುವರಿಯಲ್ಲಿ ಅವರು ಕೃತಿ ಲಾಂಗ್ ಲಿಸ್ಟ್ನಲ್ಲಿ ಆಯ್ಕೆಯಾಗಿತ್ತು. ಬಳಿಕ ಏಪ್ರಿಲ್ 8 ರಂದು ಶಾರ್ಟ್ ಲಿಸ್ಟ್ನಲ್ಲಿ ಸ್ಥಾನ ಪಡೆದಿತ್ತು.
12 ಕತೆಗಳನ್ನು ಒಳಗೊಂಡ ‘ಹಸೀನಾ ಮತ್ತು ಇತರೆ ಕತೆಗಳು’ ಎಂಬ ಕೃತಿಯನ್ನು ದೀಪಾ ಭಸ್ತಿ ಅವರು ಕನ್ನಡದಿಂದ ಇಂಗ್ಲಿಪ್ಗೆ ಅನುವಾದ ಮಾಡಿದ್ದಾರೆ. ಸಾಕಷ್ಟು ಕೃತಿಗಳು ಬೂಕರ್ ಪ್ರಶಸ್ತಿಗೆ ನಿರ್ದೇಶಿತವಾಗಿದ್ದವು. ಅದರಲ್ಲಿ ಒಟ್ಟು 153 ಕೃತಿಗಳು ಲಾಂಗ್ ಲಿಸ್ಟ್ ನಲ್ಲಿ ಸ್ಥಾನ ಪಡೆದಿದ್ದವು. ಅಂತಿಮವಾಗಿ ಶಾರ್ಟ್ ಲಿಸ್ಟ್ನಲ್ಲಿ ಆರು ಕೃತಿಗಳು ಸ್ಥಾನ ಪಡೆದಿದ್ದವು.
ಇಂಗ್ಲೆಂಡ್ನಲ್ಲಿ ನಡೆದ ಸಮಾರಂಭದಲ್ಲಿ ಅನುವಾದಕಿ ದೀಪಾ ಭಸ್ತಿ ಅವರೊಂದಿಗೆ ಹಿರಿಯ ಸಾಹಿತಿ ಬಾನು ಮುಷ್ತಾಕ್ ಪ್ರಶಸ್ತಿ ಸ್ವೀಕರಿಸಿದರು. ಬಳಿಕ ಮಾತನಾಡಿದ ಅವರು, ತಮ್ಮ ಗೆಲುವನ್ನು ವೈವಿಧ್ಯತೆಯ ಗೆಲುವು ಎಂದು ಬಣ್ಣಿಸಿದ್ದಾರೆ. ‘ಯಾವುದೇ ಕಥೆ ಸಣ್ಣದಲ್ಲ, ಅನುಭವವೆಂಬ ವಸ್ತ್ರದ ಪ್ರತಿಯೊಂದು ಎಳೆಯೂ ಇಡೀ ಕಥೆಯ ತೂಕವನ್ನು ಹೊಂದಿರುತ್ತದೆ ಎಂಬ ನಂಬಿಕೆಯಿಂದ ಈ ಪುಸ್ತಕ ರಚಿಸಲಾಗಿದೆ’ ಎಂದು ಬಾನು ಮುಷ್ತಾಕ್ ಹೇಳಿದ್ದಾರೆ. ಇನ್ನು ಅನುವಾದಕಿ ದೀಪಾ ಭಸ್ತಿ ಅವರು ಮಾತನಾಡಿ, ‘ನನ್ನ ಸುಂದರ ಭಾಷೆಗೆ ದೊರೆತ ಎಂತಹ ಸುಂದರ ಗೆಲುವು’ ಎಂದು ಹೇಳಿದ್ದಾರೆ.