ತುರುವೇಕೆರೆ: ತುರುವೇಕೆರೆ ಸೈಕಲ್ ರೈಡರ್ಸ್ ತಂಡ ಇಂದು ತುರುವೇಕೆರೆ ಪಟ್ಟಣದ ವೈ.ಟಿ.ರಸ್ತೆಯಲ್ಲಿರುವ ಶ್ರೀ ಸತ್ಯಗಣಪತಿ ಸ್ವಾಮಿಗೆ ಪೂಜೆ ಸಲ್ಲಿಸಿ ಕೆಮ್ಮಣ್ಣುಗುಂಡಿಗೆ ಸೈಕ್ಲಿಂಗ್ ರೈಡ್ ಮೂಲಕ ಪ್ರಯಾಣ ಹೊರಟಿತು.
ಮಾದಕ ವಸ್ತುಗಳಿಂದ ದೂರವಿರಿ ಎಂಬ ಸಂದೇಶ ಸಾರುವ ಸಲುವಾಗಿ ತುರುವೇಕೆರೆಯಿಂದ 130 ಕಿಲೋಮೀಟರ್ ದೂರವಿರುವ ಕೆಮ್ಮಣ್ಣುಗುಂಡಿಗೆ ಸೈಕಲ್ ಮೂಲಕ ಪ್ರಯಾಣ ಆರಂಭಿಸಿರುವ 11 ಮಂದಿಯ ತಂಡವು ತುರುವೇಕೆರೆ, ತಿಪಟೂರು,ಅರಸೀಕೆರೆ, ಕಡೂರು ಮಾರ್ಗವಾಗಿ ಕಲ್ಲತ್ತಗಿರಿ, ಕೆಮ್ಮಣ್ಣುಗುಂಡಿ ತಲುಪಿ ನಾಳೆ ತುರುವೇಕೆರೆಗೆ ಹಿಂದಿರುಗಲಿದೆ. ಉತ್ತಮ ಉದ್ದೇಶವಿಟ್ಟುಕೊಂಡು ಹೊರಟಿರುವ ಸೈಕ್ಲಿಂಗ್ ತಂಡಕ್ಕೆ ಸೈಕ್ಲಿಂಗ್ ತಂಡಕ್ಕೆ ಪಟ್ಟಣದ ಹಿರಿಯ ವೈದ್ಯರಾದ ಡಾ.ನಾಗರಾಜ್, ಡಾ.ನಂಜಪ್ಪ, ಪಪಂ ಮಾಜಿ ಅಧ್ಯಕ್ಷ ಆರ್.ಮಲ್ಲಿಕಾರ್ಜುನ್ ಚಾಲನೆ ನೀಡಿದರು.
ವೈದ್ಯ ಡಾ.ನಾಗರಾಜ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಅತಿ ಕಡಿಮೆ ವಯಸ್ಸಿನ ಯುವಸಮೂಹ ಪಾರ್ಶ್ವವಾಯುಗೆ ತುತ್ತಾಗುತ್ತಿದ್ದಾರೆ, ಇನ್ನೂ ಕೆಲವರು ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ. ಇದಕ್ಕೆಲ್ಲಾ ದೈನಂದಿನ ಜೀವನ ವಿಧಾನವೇ ಕಾರಣವಾಗಿದೆ. ಪ್ರತಿನಿತ್ಯ 30 ನಿಮಿಷಗಳ ಕಾಲ ಸೈಕ್ಲಿಂಗ್, ಈಜಾಡುವುದು ಮಾಡಿದರೆ ದೇಹದ ಪ್ರತಿಯೊಂದು ಅಂಗಕ್ಕೂ ವ್ಯಾಯಾಮವಾದಂತಾಗಿ ದೇಹದಲ್ಲಿ ಹೊಸ ಚೈತನ್ಯ ಮೂಡುತ್ತದೆ. ಚೈತನ್ಯಯುತ ದೇಹದಿಂದ ಆರೋಗ್ಯವೃದ್ದಿಯಾಗುತ್ತದೆ, ಅನಾರೋಗ್ಯವನ್ನು ದೂರವಿಡಲು ಸಹಕಾರಿಯಾಗುತ್ತದೆ ಎಂದರು.

ವೈದ್ಯ ಡಾ.ನಂಜಪ್ಪ ಮಾತನಾಡಿ, ಶೇ..20 ರಷ್ಟು ಯುವಕರು ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವ ಬಗ್ಗೆ ಜಯದೇವ ಹೃದ್ರೋಗ ಕೇಂದ್ರದಿಂದ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದೆ. ಈ ವರದಿ ಬಹಳ ಆತಂಕಕಾರಿಯಾಗಿದೆ. ದೈಹಿಕ ಶ್ರಮವಿಲ್ಲದ ಜೀವನಕ್ರಮ ಅನಾರೋಗ್ಯಕ್ಕೆ ಮೂಲ ಕಾರಣವಾಗಿದೆ. ಯುವಸಮೂಹ ದೇಶದ ಭವಿಷ್ಯವಾಗಿದ್ದು, ಈ ನಿಟ್ಟಿನಲ್ಲಿ ಯುವಸಮೂಹ ಬೈಕ್, ಮೊಬೈಲ್ ಬಿಟ್ಟು ತಮ್ಮ ದೇಹವನ್ನು ದಣಿಸಿ ಬದುಕುವ ಜೀವನಕ್ರಮವನ್ನು ಅಳವಡಿಸಿಕೊಳ್ಳಬೇಕು. ಸೈಕ್ಲಿಂಗ್ ಸೇರಿದಂತೆ ವಿವಿಧ ರೀತಿಯ ವ್ಯಾಯಾಮ, ಯೋಗ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕೆಂದರು.
ಪಪಂ ಮಾಜಿ ಅಧ್ಯಕ್ಷ ಆರ್.ಮಲ್ಲಿಕಾರ್ಜುನ್ ಮಾತನಾಡಿ, ಆರೋಗ್ಯ ಎಂಬುದು ಹಣ ಕೊಟ್ಟರೆ ಸಿಗುವಂತಹುದಲ್ಲ, ದೇಹದ ಆರೋಗ್ಯ ಕಾಪಾಡಿಕೊಳ್ಳುವ ಹೊಣೆಗಾರಿಕೆ ನಮ್ಮದೇ ಆಗಿದೆ. ಪ್ರಸ್ತುತ ಯುವಜನತೆ ತಮ್ಮ ಆರೋಗ್ಯದ ಬಗ್ಗೆ ಗಮನಹರಿಸುತ್ತಿಲ್ಲ, ಇಂತಹ ಸಂದರ್ಭದಲ್ಲಿ ಯುವಜನರಿಗೆ ಮಾದಕ ವ್ಯಸನದಿಂದ ದೂರವಿರುವ ಹಾಗೂ ದೈಹಿಕ ಆರೋಗ್ಯದ ಬಗ್ಗೆ ಉತ್ತಮ ಜೀವನಪಾಠವನ್ನು ತಿಳಿಸುವ ನಿಟ್ಟಿನಲ್ಲಿ ಸೈಕ್ಲಿಂಗ್ ತಂಡ ಮುಂದಾಗಿರುವುದು ಸಂತೋಷದ ಸಂಗತಿಯಾಗಿದೆ ಎಂದರು.
ತುರುವೇಕೆರೆ ಸೈಕಲ್ ರೈಡರ್ಸ್ ತಂಡದ ಅಧ್ಯಕ್ಷ ಎಸ್. ಯೋಗಾನಂದ್ ಮಾತನಾಡಿ, ಹಿಂದಿನ ಕಾಲದಲ್ಲಿ ಸೈಕಲ್ ಸಂಚಾರಿ ವ್ಯವಸ್ಥೆಗೆ ಪ್ರಮುಖ ವಾಹನವಾಗಿತ್ತು. ಪ್ರಸ್ತುತ ದಿನಗಳಲ್ಲಿ ಸೈಕಲ್ ಎಂದರೆ ಜನರಲ್ಲಿ ಕೀಳರಿಮೆ ಪ್ರಾರಂಭವಾಗಿದೆ. ಆದರೆ ಮನುಷ್ಯನ ಕೊನೆಯ 10 ವರ್ಷಗಳು ಅನಾರೋಗ್ಯವಿಲ್ಲದೆ ಬದುಕನ್ನು ಸಾಗಿಸಬೇಕಾದರೆ ಸೈಕಲ್ ಪ್ರಮುಖ ಸಾಧನವಾಗಿದೆ. ಸೈಕ್ಲಿಂಗ್ ಮಾನಸಿಕ ಒತ್ತಡವನ್ನು ಕಡಿಮೆ ಮಾಡುವುದಲ್ಲದೆ ದೈಹಿಕವಾಗಿ ಆರೋಗ್ಯವನ್ನು ಸದೃಢಗೊಳಿಸುತ್ತದೆ ಎಂದರು.
ಕಳೆದ 2 ವರ್ಷದ ಹಿಂದೆ ಸಮಾನ ಮನಸ್ಕರೆಲ್ಲಾ ಸೇರಿ ಈ ಸೈಕಲ್ ರೈಡರ್ಸ್ ತಂಡವನ್ನು ಕಟ್ಟಿದ್ದೇವೆ. ಈಗಾಗಲೇ ಬೆಂಗಳೂರು, ಮೈಸೂರು ಸೇರಿದಂತೆ ವಿವಿಧ ಕಡೆ ಸೈಕ್ಲಿಂಗ್ ರೈಡ್ ಗಳಲ್ಲಿ ಭಾಗವಹಿಸಿದ್ದೇವೆ. ರಾಷ್ಟ್ರೀಯ ವೈದ್ಯರ ದಿನಾಚರಣೆ, ಮಾದಕ ವಸ್ತು ವಿರೋಧಿ ದಿನಾಚರಣೆ ಅಂಗವಾಗಿ ಯುವಸಮೂಹವನ್ನು ಮಾದಕ ವಸ್ತುಗಳಿಂದ ದೂರವಿರುವಂತೆ ಸಂದೇಶ ಸಾರುವ ನಿಟ್ಟಿನಲ್ಲಿ ಕೆಮ್ಮಣ್ಣುಗುಂಡಿಗೆ ನಮ್ಮ ತಂಡ ಸೈಕಲ್ ರೈಡ್ ಹೊರಟಿದ್ದು, ನಾಳೆ ಭಾನುವಾರ ತುರುವೇಕೆರೆಗೆ ಮರಳಲಿದ್ದೇವೆ. ಸೈಕಲ್ ರೈಡರ್ಸ್ ತಂಡದ ಶೋಭಿತ್, ದಿಲೀಪ್, ಕಿರಣ್, ಸತೀಶ್, ಸುನಿಲ್, ರಾಜೀವ್, ಲಲಿತ್ ಚಂದ್, ಮನೋಜ್, ಅಫ್ನಾನ್ ನವಾಜ್, ವೆಂಕಟೇಶ್ ಕೆಮ್ಮಣ್ಣುಗುಂಡಿ ಪ್ರಯಾಣದ ರೈಡಿಂಗ್ ತಂಡದಲ್ಲಿದ್ದು, ಇವರೊಂದಿಗೆ ಬೆಂಜಮಿನ್ ಪಾಲ್ ಡಿಸೋಜ, ಆಸೀಫ್ ನವಾಜ್, ಪ್ರದೀಪ್ ಗುಪ್ತ ಅಗತ್ಯ ಸಹಕಾರ ನೀಡಲಿದ್ದಾರೆ ಎಂದರು.
ವರದಿ: ಗಿರೀಶ್ ಕೆ ಭಟ್




