ಪುಣೆ: ‘ಪೂರ್ವದ ಆಕ್ಸ್‌ಫರ್ಡ್’ ಎಂದು ಕರೆಯಲ್ಪಡುವ ಪುಣೆ ತನ್ನ ಉನ್ನತ ಮಟ್ಟದ ಶಿಕ್ಷಣದಿಂದಾಗಿಯೇ ದೇಶಾದ್ಯಂತ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತದೆ.
ಆದರೂ ಅಲ್ಲಿನ ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾಲಯದಲ್ಲಿ (SPPU) ಒಂದು ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ.ವಿಶ್ವವಿದ್ಯಾಲಯದ ಬಾಲಕಿಯರ ಹಾಸ್ಟೆಲ್‌ನಲ್ಲಿ ಸಿಗರೇಟ್ ಪ್ಯಾಕ್, ಮದ್ಯದ ಬಾಟಲಿಗಳ ರಾಶಿಯೇ ಕಂಡುಬಂದಿದೆ.
ಮಾಹಿತಿಯ ಪ್ರಕಾರ ಎಸ್‌ಪಿಪಿಯುನ ಬಾಲಕಿಯರ ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿನಿಯರು ದೊಡ್ಡ ಪ್ರಮಾಣದಲ್ಲಿ ಮದ್ಯಪಾನ ಮತ್ತು ಧೂಮಪಾನ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ನಿವಾಸಿ ವಿದ್ಯಾರ್ಥಿನಿಯೊಬ್ಬಳು ಇದರ ಫೋಟೋ ಹಾಗೂ ವಿಡಿಯೋವನ್ನು ಸಾಕ್ಷಿಯಾಗಿ ತೆಗೆದುಕೊಂಡು ಪರಿಸ್ಥಿತಿಯನ್ನು ಬಹಿರಂಗಪಡಿಸಿದ್ದಾಳೆ.
ಈ ವಿಡಿಯೋ ಹಾಗೂ ಫೋಟೋದಲ್ಲಿ ಬಾಲಕಿಯರ ಹಾಸ್ಟೆಲ್‌ನ ಕೋಣೆಗಳಲ್ಲಿ ಹಲವಾರು ಸಿಗರೇಟ್ ಪ್ಯಾಕೆಟ್‌ಗಳು ಡ್ರಾಯರ್‌ಗಳಲ್ಲಿ ಸಂಗ್ರಹವಾಗಿರುವುದು ಮತ್ತು ಸಿಂಕ್ ಅಡಿಯಲ್ಲಿ ಮದ್ಯದ ಖಾಲಿ ಬಾಟಲಿಗಳು ಬಿದ್ದಿರುವುದು ಕಂಡುಬಂದಿದೆ.
ಇದನ್ನು ಬಹಿರಂಗಪಡಿಸಿದ ವಿದ್ಯಾರ್ಥಿನಿ ಹಾಸ್ಟೆಲ್‌ನ ವಾರ್ಡನ್‌ಗೆ ಪದೇ ಪದೇ ಈ ಬಗ್ಗೆ ದೂರು ನೀಡಿದರೂ ಅವರು ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ ಎನ್ನಲಾಗಿದೆ.
ನಂತರ ಈ ಬಗ್ಗೆ ರಿಜಿಸ್ಟ್ರಾರ್ ಮತ್ತು ಉಪಕುಲಪತಿಗಳಿಗೆ ಪತ್ರ ಬರೆದಿದ್ದಾರೆ. ಈ ಔಪಚಾರಿಕ ದೂರಿನ ಹೊರತಾಗಿಯೂ, ಧೂಮಪಾನ ಮತ್ತು ಮದ್ಯಪಾನದಲ್ಲಿ ಭಾಗಿಯಾಗಿದ್ದಾರೆಂದು ಹೇಳಲಾದ ವಿದ್ಯಾರ್ಥಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ.
ಈ ನಡುವೆ ಆರೋಪಿ ವಿದ್ಯಾರ್ಥಿಗಳ ವಿರುದ್ಧ ಸರಿಯಾದ ಕ್ರಮ ಕೈಗೊಳ್ಳದಿದ್ದರೆ ಮತ್ತು ವಿಶ್ವವಿದ್ಯಾಲಯದ ಆವರಣವನ್ನು ಮದ್ಯ ಮತ್ತು ಸಿಗರೇಟ್ ಮುಕ್ತಗೊಳಿಸದಿದ್ದರೆ, ಬಲವಾದ ಪ್ರತಿಭಟನೆ ನಡೆಸುವುದಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಎಚ್ಚರಿಸಿದೆ.