ಬೆಂಗಳೂರು : ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯ ಅಬ್ಬರ ಮುಂದುವರೆದಿದ್ದು, ಮಂಗಳವಾರ ಮಳೆಗೆ 6 ಮಂದಿ ಬಲಿಯಾಗಿದ್ದಾರೆ.
ಮುಂಗಾರು ಪೂರ್ವ ಮಳೆಗೆ ರಾಯಚೂರು ಜಿಲ್ಲೆಯಲ್ಲಿ ಇಬ್ಬರು, ಧಾರವಾಡ, ಬಳ್ಳಾರಿ ಹಾಗೂ ಕಲಬುರಗಿ ಜಿಲ್ಲೆಯಲ್ಲಿ ತಲಾ ಒಬ್ಬೊಬ್ಬರು ಸಿಡಿಲಿಗೆ ಬಲಿಯಾಗಿದ್ದಾರೆ.ರಾಮನಗರದ ಹೊರವಲಯದಲ್ಲಿ ಬೆಂಗಳೂರಿನ ಬಾಲಕನೊಬ್ಬ ಅರ್ಕಾವತಿ ನದಿಯಲ್ಲಿ ಕೊಚ್ಚಿಹೋಗಿದ್ದಾನೆ.
ರಾಮನಗರದ ಹಳ್ಳಿಮಾಳ ಸಮೀಪ ಅರ್ಕಾವತಿ ನದಿ ಪಕ್ಕದಲ್ಲಿರುವ ದರ್ಗಾಗೆ ಬಂದಿದ್ದ ಬೆಂಗಳೂರಿನ ಲಕ್ಕಸಂದ್ರದ ಮೊಹಮ್ಮದ್ ಸೈಫ್ (9) ಎಂಬ ಬಾಲಕ ನೀರಿನಲ್ಲಿ ಆಟವಾಡುವಾಗ ಕಾಲುಜಾರಿ ಬಿದ್ದು ಕೊಚ್ಚಿ ಹೋಗಿದ್ದಾನೆ.
ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಕರಜಗಿಯಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ರೈತ ನಬಿಲಾಲ ಚೌಧರಿ (70) ಎಂಬುವರು ಮೃತಪಟ್ಟಿದ್ದಾರೆ.
ರಾಯಚೂರು ಜಿಲ್ಲೆ ಅರಕೇರಾ ತಾಲೂಕಿನ ಭೋಗಿ ರಾಮನಗುಡ್ಡ ಗ್ರಾಮದಲ್ಲಿ ಜಮೀನಿನಲ್ಲಿ ಕುರಿ ಮೇಯಿಸುತ್ತಿದ್ದ ಹನುಮಗೌಡ ನಾಯಕ (16) ಎಂಬುವರು ಸಿಡಿಲು ಬಡಿದು ಮೃತಪಟ್ಟಿದ್ದಾರೆ.
ದೇವದುರ್ಗ ತಾಲೂಕಿನ ಲಿಂಗದಹಳ್ಳಿಯಲ್ಲಿ ಸಿಡಿಲಿಗೆ ಯಲ್ಲಮ್ಮ (42) ಎಂಬುವರು ಮೃತಪಟ್ಟಿದ್ದಾರೆ. ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹಿರೇನೆರ್ತಿಯಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದುಹಿರೇಹರಕುಣಿ ಗ್ರಾಮದ ಮೈಲಾರಪ್ಪ (18) ಎಂಬುವರು ಮೃತಪಟ್ಟಿದ್ದಾರೆ. ಬಳ್ಳಾರಿ ಜಿಲ್ಲೆ ಕಂಪ್ಲಿ ತಾಲೂಕಿನ ದೇವಲಾಪುರದಲ್ಲಿ ಕುರಿ ಮೇಯಿಸುತ್ತಿದ್ದಾಗ ಸಿಡಿಲು ಬಡಿದು ಕುರಿ ಕರಿಬಸಪ್ಪ (23) ಎಂಬುವರು ಮೃತಪಟ್ಟಿದ್ದಾರೆ.