ಜಮ್ಮು ಮತ್ತು ಕಾಶ್ಮೀರ : ಪುಲ್ವಾಮಾ ಜಿಲ್ಲೆಯ ಟ್ರಾಲ್ ಪ್ರದೇಶದ ನಾದಿರ್ ಗ್ರಾಮದಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ.
48 ಗಂಟೆಗಳ ಒಳಗೆ ಈ ಪ್ರದೇಶದಲ್ಲಿ ನಡೆದ ಎರಡನೇ ಎನ್ಕೌಂಟರ್ ಇದಾಗಿದ್ದು, ಜೈಶ್-ಎ-ಮೊಹಮ್ಮದ್ಗೆ ಸೇರಿದ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ.
ಮಂಗಳವಾರ ಕೊಲ್ಲಲ್ಪಟ್ಟ ಮೂವರು ಭಯೋತ್ಪಾದಕರಲ್ಲಿ, ಹತ್ಯೆಗೀಡಾದ ಇಬ್ಬರು ಭಯೋತ್ಪಾದಕರನ್ನು ಶಾಹಿದ್ ಕುಟ್ಟಯ್ ಮತ್ತು ಅದ್ನಾನ್ ಶಫಿ ಎಂದು ಗುರುತಿಸಲಾಗಿದೆ, ಇಬ್ಬರೂ ಶೋಪಿಯಾನ್ ನಿವಾಸಿಗಳು.
2023 ರಲ್ಲಿ ಲಷ್ಕರ್‌ಗೆ ಸೇರಿದ ಕುಟ್ಟಯ್, ಕಳೆದ ವರ್ಷ ಏಪ್ರಿಲ್ 8 ರಂದು ಡ್ಯಾನಿಶ್ ರೆಸಾರ್ಟ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಭಾಗಿಯಾಗಿದ್ದ, ಇದರಲ್ಲಿ ಇಬ್ಬರು ಜರ್ಮನ್ ಪ್ರವಾಸಿಗರು ಮತ್ತು ಒಬ್ಬ ಚಾಲಕ ಗಾಯಗೊಂಡಿದ್ದರು.
ಕಳೆದ ವರ್ಷ ಮೇ ತಿಂಗಳಲ್ಲಿ ಶೋಪಿಯಾನ್‌ನ ಹೀರ್‌ಪೋರಾದಲ್ಲಿ ಬಿಜೆಪಿ ಸರಪಂಚರೊಬ್ಬರ ಹತ್ಯೆಯಲ್ಲೂ ಈತ ಭಾಗಿಯಾಗಿದ್ದ ಎಂದು ಮೂಲಗಳು ತಿಳಿಸಿವೆ.
ಶೋಪಿಯಾನ್ ಜಿಲ್ಲೆಯ ಕೆಲ್ಲರ್ ಪ್ರದೇಶದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಮೂವರು ಲಷ್ಕರ್-ಎ-ತೈಬಾ ಭಯೋತ್ಪಾದಕರನ್ನು ಹೊಡೆದುರುಳಿಸಿದ ಎರಡು ದಿನಗಳ ನಂತರ ಈ ಎನ್ ಕೌಂಟರ್ ನಡೆದಿದೆ.