ಸಿರುಗುಪ್ಪ : ನಗರದ 19ನೇ ವಾರ್ಡಿನಲ್ಲಿರುವ ಶ್ರೀ ಉರುಕುಂದಿ ಈರಣ್ಣ ಸ್ವಾಮಿ ದೇವಸ್ಥಾನದಲ್ಲಿ ಬಾದಾಮಿ ಅಮವಾಸ್ಯೆ ನಿಮಿತ್ತ ವೈಶ್ಯ ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕ ಯು.ಈರಯ್ಯ ಶೆಟ್ಟಿ ಅವರ ಕುಟುಂಬದಿಂದ ಅನ್ನ ದಾಸೋಹ ಕಾರ್ಯಕ್ರಮ ಜರುಗಿತು. ದೇವಸ್ಥಾನ ಸಮಿತಿಯಿಂದ ದಾನಿಗಳನ್ನು ಸನ್ಮಾನಿಸಲಾಯಿತು.ಬಾದಾಮಿ ಅಮವಾಸ್ಯೆ ನಿಮಿತ್ತ ದೇವಸ್ಥಾನದಲ್ಲಿ ಪಂಚಾಭಿಷೇಕ, ವಿವಿಧ ಫಲಪುಷ್ಪಗಳ ಅಲಂಕಾರ, ಮಹಾಮಂಗಳಾರತಿ, ಹಾಗೂ ಪಲ್ಲಕ್ಕಿ ಸೇವೆ ಜರುಗಿದ್ದು, ಹಲವಾರು ಭಕ್ತರು ಭಾಗಿಯಾಗಿ ದೇವರ ಹರಕೆ ತೀರಿಸಿದರು.
ದಾಸೋಹ ದಾನಿಗಳಾದ ಯು.ಈರಯ್ಯ ಶೆಟ್ಟಿ, ಅವರು ಮಾತನಾಡಿ ಪ್ರತಿ ಅಮವಾಸ್ಯೆಯು ಇಲ್ಲಿ ದಾನಿಗಳ ನೆರವಿನಿಂದ ಅನ್ನದಾಸೋಹ ಜರುಗಲಿದ್ದು, ಈ ಸ್ವಾಮಿಯ ಅನುಗ್ರಹದಿಂದ ನಮ್ಮ ಕುಟುಂಬಕ್ಕೆ ಒಳಿತಾಗಿದ್ದು, ಇಂದು ನಮ್ಮ ಕುಟುಂಬ ಸಮೇತ ಬಂದು ಪಲ್ಲಕ್ಕಿ ಸೇವೆ, ದಾಸೋಹ ಸೇವೆ ಮಾಡಿರುವುದಾಗಿ ತಿಳಿಸಿದರು.
ರಂಗನಾಥ ಶೆಟ್ಟಿ ಅವರು ಮಾತನಾಡಿ ಅಪಾರ ಭಕ್ತವೃಂದವನ್ನು ಹೊಂದಿರುವ ಶ್ರೀ ಈರಣ್ಣ ಸ್ವಾಮಿಯ ಸೇವೆಗೈಯಲೆಂದು ನಗರದ ವಿವಿಧ ವಾರ್ಡ್ಗಳಿಂದ ಬಂದು ತಮ್ಮ ಕೈಲಾದ ಸೇವೆಯಲ್ಲಿ ಭಾಗಿಯಾಗುತ್ತಾರೆಂದರು.
ಯಾರಾದರೂ ಮುಂದಿನ ಅಮವಾಸ್ಯೆಗೆ ದಾಸೋಹ ಮಾಡುವ ಇಚ್ಚೆಯುಳ್ಳ ಭಕ್ತರು ಮೊದಲೇ ತಿಳಿಸಿದಲ್ಲಿ ಅವರ ಸೇವೆಗೆ ಅನುವು ಮಾಡಿಕೊಡಲಾಗುವುದೆಂದು ಆರ್ಚಕ ಶರಣಯ್ಯಸ್ವಾಮಿ ತಿಳಿಸಿದರು.
ಇದೇ ವೇಳೆ ದೇವಸ್ಥಾನ ಅಭಿವೃದ್ದಿ ಟ್ರಸ್ಟಿನ ಅಧ್ಯಕ್ಷ ಬಿ.ಸುರೇಶರೆಡ್ಡಿ, ಉಪಾಧ್ಯಕ್ಷ ಎಳ್ಳಾರ್ತಿ ವೀರೇಶ, ಪದಾಧಿಕಾರಿಗಳಾದ ಮಲ್ಲಿಕಾರ್ಜುನ, ಬದ್ರಿನಾಥ, ಗುರುರಾಜ, ಟಿ.ಎಮ್.ಆರ್.ಶ್ರೀನಿವಾಸ, ಇನ್ನಿತರ ದಾನಿಗಳು ಹಾಗೂ ಭಕ್ತರು ಇದ್ದರು.
ವರದಿ : ಶ್ರೀನಿವಾಸ ನಾಯ್ಕ

