ತುರುವೇಕೆರೆ : 2026-27 ನೇ ಸಾಲಿನ ಲಯನ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಜುಲೈ 04 ರಂದು ಶನಿವಾರ ಸಂಜೆ 6 ಗಂಟೆಗೆ ಪಟ್ಟಣದ ಚೌದ್ರಿ ಕನ್ವೆಂಷನ್ ಹಾಲ್ ನಲ್ಲಿ ಏರ್ಪಡಿಸಲಾಗಿದೆ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಹೆಚ್.ಎನ್.ಪರಮೇಶ್ವರಯ್ಯ ತಿಳಿಸಿದರು.
ಲಯನ್ಸ್ ಭವನದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ 35 ವರ್ಷಗಳಿಂದ ಲಯನ್ಸ್ ಸಂಸ್ಥೆ ತುರುವೇಕೆರೆ ತಾಲ್ಲೂಕಿನಲ್ಲಿ ಸೇವೆ ಸಲ್ಲಿಸುತ್ತಾ ಬಂದಿದೆ. ಪ್ರತಿ ವರ್ಷದಂತೆ ಈ ವರ್ಷವೂ ಹೊಸ ತಂಡ ಅಧಿಕಾರಕ್ಕೆ ಬರಲಿದ್ದು, ಜುಲೈ 04 ರಂದು ಪದಗ್ರಹಣ ಸಮಾರಂಭ ನಡೆಸಲಾಗುವುದು. ನೂತನ ಪದಾಧಿಕಾರಿಗಳಿಗೆ ಮಾಜಿ ಜಿಲ್ಲಾ ರಾಜ್ಯಪಾಲ ಡಾ.ನಾಗರಾಜ್ ರಾವ್ ಪ್ರಮಾಣವಚನ ಬೋದಿಸಲಿದ್ದಾರೆ. ಶಾಸಕ ಎಂ.ಟಿ.ಕೃಷ್ಣಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದು, ನೂತನ ಅಧ್ಯಕ್ಷರಾಗಿ ಟಿ.ಸಿ. ಸುನಿಲ್ ಬಾಬು, ಕಾರ್ಯದರ್ಶಿಯಾಗಿ ಎಸ್.ವಿ.ರವಿ, ಖಜಾಂಚಿಯಾಗಿ ಕೆ.ಎನ್. ಆನಂದ್ ಹಾಗೂ ತಂಡ ಅಧಿಕಾರ ಸ್ವೀಕರಿಸಲಿದ್ದಾರೆ ಎಂದರು.
ನಿಯೋಜಿತ ಅಧ್ಯಕ್ಷ ಸುನಿಲ್ ಬಾಬು ಮಾತನಾಡಿ, 2026-27 ನೇ ಸಾಲಿಗೆ ನನ್ನನ್ನು ಲಯನ್ಸ್ ಸಂಸ್ಥೆಯ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ ಸರ್ವ ಸದಸ್ಯರಿಗೆ ಧನ್ಯವಾದಗಳು. ಜಾಗತಿಕ ತಾಪಮಾನ ಹೆಚ್ಚಾಗುತ್ತಿದ್ದು, ಪರಿಸರ ಸಂರಕ್ಷಣೆ ನಮ್ಮೆಲ್ಲರ ಪ್ರಥಮ ಆದ್ಯ ಜವಾಬ್ದಾರಿಯಾಗಿದೆ ಈ ನಿಟ್ಟಿನಲ್ಲಿ ನನ್ನ ಅವಧಿಯಲ್ಲಿ ಎಲ್ಲಾ ಸದಸ್ಯರ ಸಹಕಾರದೊಂದಿಗೆ ಪರಿಸರ ಸಂರಕ್ಷಣೆಗೆ ಹೆಚ್ಚಿನ ಒತ್ತನ್ನು ನೀಡಲು ನಿರ್ಧರಿಸಿದ್ದೇನೆ. ಇನ್ನುಳಿದಂತೆ ವಿಶೇಷಚೇತನರಿಗೆ ನೆರವು, ಕಣ್ಣಿನ ತಪಾಸಣೆ, ಶಸ್ತçಚಿಕಿತ್ಸಾ ಶಿಬಿರ, ಪ್ರಮುಖವಾಗಿ ಕಿವುಡರಿಗೆ ಶ್ರವಣ ಸಾಧನ ನೀಡಲಾಗುವುದು. ಮಹಿಳಾ ಹಾಗೂ ಯುವ ಸಬಲೀಕರಣಕ್ಕೆ ಹೆಚ್ಚಿನ ಕಾರ್ಯಕ್ರಮವನ್ನು ಹಮ್ಮಿಕೊಂಡು ಸ್ವಾವಲಂಬಿ ಬದುಕನ್ನು ನಡೆಸಲು ಅಗತ್ಯ ತರಬೇತಿ, ಮಾರ್ಗದರ್ಶನ ಕಾರ್ಯಾಗಾರಗಳನ್ನು ನಡೆಸುವ ಬಗ್ಗೆ ಯೋಜನೆ ಕೈಗೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಎಡಿಸಿಎಸ್ ಹಾಗೂ ಸ್ವಾಗತ ಸಮಿತಿ ಅಧ್ಯಕ್ಷ ಟಿ.ವಿ. ಮಹೇಶ್, ವಲಯಾಧ್ಯಕ್ಷ ಲೋಕೇಶ್, ಜಿ.ಎಲ್.ಟಿ. ಸದಸ್ಯ ರಂಗನಾಥ್, ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಡಾ.ಚೌದ್ರಿ ನಾಗೇಶ್, ಡಾ.ಎ.ನಾಗರಾಜ್, ಪ್ರಸನ್ನ, ಶಿವಾನಂದಯ್ಯ, ರವಿ, ರಾಮಕೃಷ್ಣ, ಗಂಗಾಧರ ದೇವರಮನೆ, ಸುಮಾ ಮಲ್ಲಿಕ್, ಡಿ.ಕೆ.ನಾಗರಾಜಯ್ಯ ಸೇರಿದಂತೆ ಲಯನ್ಸ್ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್


