ಮೈಸೂರು: ಸಿನಿಮಾ ರಂಗದಲ್ಲಿ ಕೊಂಚ ಯಶಸ್ಸು, ಸ್ಟಾರ್‌ಗಿರಿ ಸಿಗುತ್ತಿದ್ದಂತೆ ತಮ್ಮ ಹಳೇ ದಿನಗಳನ್ನು ಹಾಗೂ ಕಷ್ಟದ ಕಾಲದಲ್ಲಿ ಜೊತೆಯಾಗಿದ್ದ ಬಾಲ್ಯದ ಸ್ನೇಹಿತರನ್ನು ಮರೆತುಬಿಡುವವರೇ ಹೆಚ್ಚು. ಆದರೆ, ಇಡೀ ದೇಶವೇ 'ಇಂಡಿಯನ್ ಮೈಕಲ್ ಜಾಕ್ಸನ್' ಎಂದು ಆರಾಧಿಸುವ ಆ ಬಹುಭಾಷಾ ನಟ (Prabhudeva) ಮಾತ್ರ ಈ ಗ್ಲಾಮರ್ ದುನಿಯಾದಲ್ಲೂ (Sandalwood) ತಮ್ಮ ಮಣ್ಣಿನ ಗುಣವನ್ನು ಉಳಿಸಿಕೊಂಡು ಎಲ್ಲರಿಗೂ ಮಾದರಿಯಾಗಿದ್ದಾರೆ.
ಹುಟ್ಟೂರಿನಲ್ಲಿ ವಿಶೇಷ ಪೂಜೆ ಮಾಡಿಸಿದ ಪ್ರಭುದೇವ
ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಚಿತ್ರರಂಗದಲ್ಲಿ ಸ್ಟಾರ್ ನಟನಾಗಿ, ನಿರ್ದೇಶಕನಾಗಿ ಕೋಟ್ಯಂತರ ರೂಪಾಯಿ ಸಂಪಾದಿಸುವ ಆ ಖ್ಯಾತ ಕಲಾ ಸಾಮ್ರಾಟ ಬೇರಾರೂ ಅಲ್ಲ, ಪ್ರಭುದೇವ! ಸದಾ ಮುಂಬೈ, ಚೆನ್ನೈ, ಬೆಂಗಳೂರು ಅಂತ ಶೂಟಿಂಗ್‌ಗಳಲ್ಲಿ ಬ್ಯುಸಿಯಾಗಿರುವ ಅವರು, ಇತ್ತೀಚೆಗೆ ತಮ್ಮ ಬಿಡುವಿಲ್ಲದ ಶೂಟಿಂಗ್ ವೇಳಾಪಟ್ಟಿಯ ನಡುವೆಯೂ ಮೈಸೂರು ಜಿಲ್ಲೆಯ ತಮ್ಮ ಹುಟ್ಟೂರಾದ 'ದೂರ' ಗ್ರಾಮಕ್ಕೆ ದಿಢೀರ್ ಭೇಟಿ ನೀಡಿದ್ದರು.
ಹಳ್ಳಿಗೆ ಬಂದ ತಕ್ಷಣ ಪ್ರಭುದೇವ ಅವರು ಮೊದಲು ತಾವು ಖುದ್ದು ನಿಂತು ಜೀರ್ಣೋದ್ಧಾರಗೊಳಿಸಿದ್ದ ಶ್ರೀ ಮಹದೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳಿ, ಕುಲದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಹರಕೆ ತೀರಿಸಿದರು.
ದೇವಸ್ಥಾನದ ಧಾರ್ಮಿಕ ಕಾರ್ಯಗಳು ಮುಗಿದ ಬಳಿಕ ಪ್ರಭುದೇವ ತಾವು ಬಾಲ್ಯದಲ್ಲಿ ಆಡಿ ಬೆಳೆದ ದೂರ ಗ್ರಾಮದ ತೋಟದ ಮನೆಗೆ ತೆರಳಿದ ಅವರು, ಅಲ್ಲಿ ತಮ್ಮ ಬಾಲ್ಯದ ಆತ್ಮೀಯ ಗೆಳೆಯರಾದ ಮಂಜು ಮತ್ತು ಉಮೇಶ್ ಅವರನ್ನ ಭೇಟಿ ಮಾಡಿದ್ದಾರೆ.
ತಾವು ಇಡೀ ದೇಶವೇ ಮೆಚ್ಚಿದ ಸ್ಟಾರ್ ಡ್ಯಾನ್ಸ್ ಮಾಸ್ಟರ್ ಹಾಗೂ ಡೈರೆಕ್ಟರ್ ಅನ್ನೋ ಹಮ್ಮು-ಬಿಮ್ಮು ಎಲ್ಲೂ ಪ್ರದರ್ಶಿಸದೆ, ಹಳೇ ನೆನಪುಗಳನ್ನು ಹಂಚಿಕೊಳ್ಳುತ್ತಾ ಸ್ನೇಹಿತರೊಂದಿಗೆ ಮನಬಿಚ್ಚಿ ಹರಟೆ ಹೊಡೆದರು.
ಸ್ನೇಹಿತರ ಜೊತೆ ಊಟ ಸವಿದ ನಟ
ಅಷ್ಟೇ ಅಲ್ಲದೆ, ತೋಟದ ಮನೆಯ ನೆಲದ ಮೇಲೆಯೇ ಸಾಲಾಗಿ ಕುಳಿತು, ಹಸಿರು ಬಾಳೆ ಎಲೆ ಹಾಕಿಸಿಕೊಂಡು ಗೆಳೆಯರ ಜೊತೆಗೂಡಿ ಹಳ್ಳಿ ಶೈಲಿಯ, ಊಟವನ್ನು ಸವಿದಿದ್ದಾರೆ.
ಎಷ್ಟೇ ಎತ್ತರಕ್ಕೆ ಬೆಳೆದರೂ ತಾನು ಹುಟ್ಟಿದ ಮಣ್ಣು ಮತ್ತು ಬಾಲ್ಯದ ದೋಸ್ತಿಯನ್ನು ಮರೆಯದ ಪ್ರಭುದೇವ ಅವರ ಈ ಸಿಂಪ್ಲಿಸಿಟಿ ಕಂಡು ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಹಾಗೂ ಸಿನೆಪ್ರಿಯರು ಫಿದಾ ಆಗಿದ್ದು, ಇವರ ಸರಳತೆಗೆ ಹ್ಯಾಟ್ಸ್ ಆಫ್ ಹೇಳುತ್ತಿದ್ದಾರೆ.


