ನವದೆಹಲಿ-: ಉತ್ತರಾಖಂಡದ ಹಲ್ದ್ವಾನಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ್ದ ಸ್ಥಳದಲ್ಲಿ ನಡೆದಿದ್ದೆಂದು ಹೇಳಲಾಗುತ್ತಿರುವ 'ಶುದ್ಧೀಕರಣ' ಕಾರ್ಯಕ್ರಮಕ್ಕೆ ಸಂಬಂಧಿಸಿದ ವಿವಾದ ಇದೀಗ ಹೊಸ ರಾಜಕೀಯ ತಿರುವು ಪಡೆದುಕೊಂಡಿದೆ.
ಈ ವಿಚಾರದ ಕುರಿತು ಹೇಳಿಕೆ ನೀಡಿದ್ದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಹಲ್ದ್ವಾನಿ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ವಾಲ್ಮೀಕಿ ಸಮುದಾಯಕ್ಕೆ ಸೇರಿದ ಅಮಿತ್ ಕುಮಾರ್ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಹುಲ್ ಗಾಂಧಿ ಅವರು 'ಶುದ್ಧೀಕರಣ' ಘಟನೆಗೆ ಜಾತಿಯ ಬಣ್ಣ ನೀಡಿ, ಪರಿಶಿಷ್ಟ ಜಾತಿ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂಬುದು ದೂರಿನ ಪ್ರಮುಖ ಆರೋಪವಾಗಿದೆ.
ಪ್ರಕರಣದಲ್ಲಿ ಭಾರತೀಯ ನ್ಯಾಯ ಸಂಹಿತೆಯ (BNS) ಸಂಬಂಧಿತ ಸೆಕ್ಷನ್‌ಗಳ ಜತೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಅಡಿಯಲ್ಲಿ ಕೂಡ ಆರೋಪಗಳನ್ನು ದಾಖಲಿಸಲಾಗಿದೆ. ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಆಗಸ್ಟ್ 8ರಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದರು.
ಇದಾದ ಕೆಲವೇ ದಿನಗಳ ಬಳಿಕ, ಆಗಸ್ಟ್ 11ರಂದು ಅದೇ ಸ್ಥಳದಲ್ಲಿ 'ಶುದ್ಧೀಕರಣ ಹವನ' ಅಥವಾ ಧಾರ್ಮಿಕ ವಿಧಿ ನಡೆಸಲಾಗಿದೆ ಎಂಬ ವರದಿಗಳು ಹೊರಬಂದಿದ್ದವು.
ಈ ಘಟನೆಯನ್ನೇ ಕಾಂಗ್ರೆಸ್ ನಾಯಕರು ಜಾತಿ ಆಧಾರಿತ ತಾರತಮ್ಯ ಮತ್ತು ಅಸ್ಪೃಶ್ಯತೆಯೊಂದಿಗೆ ಜೋಡಿಸಿ ಪ್ರಶ್ನಿಸಿದರು.
ಖರ್ಗೆ ಅವರು ದಲಿತ ಸಮುದಾಯಕ್ಕೆ ಸೇರಿದವರಾಗಿರುವ ಹಿನ್ನೆಲೆಯಲ್ಲಿ ಅವರ ಭಾಷಣದ ಬಳಿಕ ಸ್ಥಳವನ್ನು 'ಶುದ್ಧೀಕರಿಸಲಾಗಿದೆ' ಎಂಬುದು ಕಾಂಗ್ರೆಸ್‌ನ ಪ್ರಮುಖ ಆರೋಪವಾಗಿದೆ.
ಆದರೆ ಈ ಆರೋಪವನ್ನು ಬಿಜೆಪಿ ಹಾಗೂ ಕಾರ್ಯಕ್ರಮಕ್ಕೆ ಸಂಬಂಧಿಸಿದ ಸ್ಥಳೀಯರು ತಳ್ಳಿಹಾಕಿದ್ದಾರೆ. ಶುದ್ಧೀಕರಣ ಕಾರ್ಯಕ್ರಮವನ್ನು ಖರ್ಗೆ ಅವರ ಜಾತಿಗೆ ಸಂಬಂಧಿಸಿ ನಡೆಸಲಾಗಿಲ್ಲ; ಮೈದಾನದಲ್ಲಿ ಇದ್ದ ಕಸ, ಕೊಳಕು ಮತ್ತು ಇತರ ಅಶುಚಿತ್ವವನ್ನು ತೆರವುಗೊಳಿಸುವ ಉದ್ದೇಶದಿಂದ ಸ್ವಚ್ಛತಾ ಕಾರ್ಯ ಹಾಗೂ ಹವನ ನಡೆಸಲಾಗಿತ್ತು ಎಂಬ ವಾದವನ್ನು ಅವರು ಮುಂದಿಟ್ಟಿದ್ದಾರೆ.


