ನವದೆಹಲಿ : ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯ ವೇಳೆ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ (Basavaraja shivannanavar) ಅವರಿಗೆ ಸಚಿವ ಸ್ಥಾನ (Ministry) ನೀಡದ ವಿಚಾರವಾಗಿ ಸಿದ್ದರಾಮಯ್ಯ (Siddaramaiah) ಅವರು ಪಕ್ಷದ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರ ಬಳಿ ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ.
ಆಗಸ್ಟ್ 20ರ ಬುಧವಾರ ನಡೆದ ಈ ಭೇಟಿಯಲ್ಲಿ ಶಿವಣ್ಣನವರ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳುವಂತೆ ಸಿದ್ದರಾಮಯ್ಯ ಆಗ್ರಹಿಸಿದ್ದರು. ಆದರೆ ಹೈಕಮಾಂಡ್ ಮಹಿಳಾ ಮೀಸಲಾತಿ ಅಡಿಯಲ್ಲಿ ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಅವರನ್ನು ಆಯ್ಕೆ ಮಾಡಲು ನಿರ್ಧರಿಸಿತ್ತು.
ಈ ನಿರ್ಧಾರದಿಂದ ಸಿದ್ದರಾಮಯ್ಯ ಬೇಸರಗೊಂಡಿದ್ದರು. ನಂತರ ಬೆಳವಣಿಗೆಯಲ್ಲಿ ಗಾಯತ್ರಿ ಅವರು ಸದ್ಯಕ್ಕೆ ಪ್ರಮಾಣ ವಚನ ಸ್ವೀಕರಿಸದಂತೆ ಸೂಚನೆ ನೀಡಲಾಗಿದ್ದು, ಪ್ರಮಾಣ ವಚನ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿಗಳು ಹಾಜರಾಗಿರಲಿಲ್ಲ.
ಸಿದ್ದರಾಮಯ್ಯ ಸೂಚಿಸಿರುವ ಶಾಸಕರಿಗೆ ಶೀಘ್ರದಲ್ಲೇ ಅವಕಾಶ ಕಲ್ಪಿಸಲಾಗುವುದು ಎಂದು ವೇಣುಗೋಪಾಲ್ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜೊತೆಗೆ ಮಹಿಳಾ ಕೋಟಾದಲ್ಲಿ ಉಮಾಶ್ರೀ ಅವರಿಗೆ ಸಚಿವ ಸ್ಥಾನ ನೀಡಬೇಕೆಂಬ ಸಿದ್ದರಾಮಯ್ಯ ಅವರ ಬೇಡಿಕೆ ಈಡೇರದೆ, ಅವರನ್ನು ಪರಿಷತ್ ಉಪಸಭಾಪತಿಯನ್ನಾಗಿ ನೇಮಿಸಿರುವುದಕ್ಕೂ ಅವರು ಅತೃಪ್ತಿ ವ್ಯಕ್ತಪಡಿಸಿದ್ದಾರೆ.


