ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಹೊಸ ಪ್ರಾದೇಶಿಕ ಶಕ್ತಿಯ ಉದಯಕ್ಕೆ ಮುಹೂರ್ತ ನಿಗದಿಯಾಗಿದ್ದು, ಸಮಾನ ಮನಸ್ಕರನ್ನೊಳಗೊಂಡ ನೂತನ ರಾಜಕೀಯ ಪಕ್ಷವನ್ನು ಶೀಘ್ರದಲ್ಲೇ ಸ್ಥಾಪಿಸುವುದಾಗಿ ಸ್ಯಾಂಡಲ್‍ವುಡ್ ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಘೋಷಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಕರ್ನಾಟಕದಲ್ಲಿ ಪರ್ಯಾಯ ರಾಜಕೀಯ ಚಳವಳಿಯ ಅಗತ್ಯ ತುರ್ತಾಗಿ ಮೂಡಿಬಂದಿದೆ.
ಮುಂಬರುವ ಜನವರಿ ಒಳಗೆ ಹೊಸ ಪ್ರಾದೇಶಿಕ ಪಕ್ಷಕ್ಕೆ ಚಾಲನೆ ನೀಡಲು ಸಂಪೂರ್ಣ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಈಗಾಗಲೇ ನೂತನ ಪಕ್ಷ ಸ್ಥಾಪನೆಗೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ವಿವಿಧ ಜನಪರ ಸಂಘಟನೆಗಳ ಜೊತೆ ಸಮಾಲೋಚನೆ ನಡೆಸಲಾಗುತ್ತಿದೆ.
ರೈತ, ದಲಿತ, ಕಾರ್ಮಿಕ ಮತ್ತು ವಿವಿಧ ಸಂಘಟನೆಗಳು ತಮ್ಮದೇ ಆದ ಪ್ರತ್ಯೇಕ ಅಜೆಂಡಾಗಳನ್ನು ಇಟ್ಟುಕೊಂಡು ಕೆಲಸ ಮಾಡುತ್ತಿವೆ.
ಆದರೆ, ಈ ಎಲ್ಲಾ ಜನಪರ ಧ್ವನಿಗಳನ್ನು ಒಂದೇ ವೇದಿಕೆಯಡಿ ತರಲು ಸಮಾನ ಮನಸ್ಕರೆಲ್ಲರೂ ಒಗ್ಗೂಡಿ ನೂತನ ರಾಜಕೀಯ ಪಕ್ಷವನ್ನು ಕಟ್ಟುವುದು ಅನಿವಾರ್ಯವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.


