ತುಮಕೂರು: ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆರ್. ಜಯಶ್ರೀ ಎಂಬ ಮಹಿಳಾ ಪೊಲೀಸ್ ಅಧಿಕಾರಿಗೆ ಸಂಬಂಧಿಸಿದ ವಿವಾದಾತ್ಮಕ (Shocking) ವಿಡಿಯೋ ಕಾಲ್ (Video Call) ಪ್ರಕರಣದ ಬೆನ್ನಲ್ಲೇ, ಸಾಯಿ ಕುಮಾರ್ ಅಲಿಯಾಸ್ ಸುರೇಶ್ ಅವರ ತಂದೆ ನಾಗಲಿಂಗಯ್ಯ ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ತಮ್ಮ ಮಗನಿಗೆ ಪದೇಪದೇ ಸುಳ್ಳು ಪ್ರಕರಣಗಳನ್ನು (Fake Case) ದಾಖಲಿಸಿ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿರುವ ಅವರು, ಮಾಧ್ಯಮಗಳ ಮುಂದೆ ಕಣ್ಣೀರಿಟ್ಟು ಅಸಹಾಯಕತೆ ತೋಡಿಕೊಂಡಿದ್ದಾರೆ.
ಕುಣಿಗಲ್ ತಾಲೂಕಿನ ಕಲ್ಲುಹಳ್ಳಿ ಪಾಳ್ಯದ ತಮ್ಮ ತೋಟದ ಮನೆಯಲ್ಲಿ ಮಾತನಾಡಿದ ನಾಗಲಿಂಗಯ್ಯ, ಮಗನ ವಿರುದ್ಧ ಪ್ರಕರಣಗಳನ್ನು ದಾಖಲಿಸಿ ಬ್ಲ್ಯಾಕ್‌ಮೇಲ್ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಮಗ ತಪ್ಪು ಮಾಡಿದ್ದರೆ ಕಾನೂನುಬದ್ಧವಾಗಿ ಕ್ರಮ ಕೈಗೊಳ್ಳಲಿ, ಆದರೆ ಆತನ ಜೀವನದ ಜೊತೆ ಆಟವಾಡಬಾರದು ಎಂದು ಮನವಿ ಮಾಡಿದ್ದಾರೆ.
"ನನ್ನ ಮಗ ತಪ್ಪು ಮಾಡಿದ್ದರೆ ನಿಮ್ಮ ಮಕ್ಕಳಂತೆ ಭಾವಿಸಿ ತಿದ್ದಿಕೊಳ್ಳಲು ಅವಕಾಶ ನೀಡಿ. ಅವನ ಜೀವನದ ಜೊತೆ ಆಟವಾಡಬೇಡಿ. ತಪ್ಪೋ-ಸರಿಯೋ ಇನ್ನು ಮುಂದೆ ಅವನಿಗೆ ನಾನೇ ಬುದ್ಧಿ ಕಲಿಸುತ್ತೇನೆ. ಬೇಕಾದರೆ ನಿಮ್ಮ ಕೈ-ಕಾಲು ಹಿಡಿಯುತ್ತೇನೆ. ನನ್ನ ಮಗನಿಗೆ ಬದುಕಲು ಬಿಡಿ" ಎಂದು ನಾಗಲಿಂಗಯ್ಯ ಭಾವುಕರಾಗಿ ಮನವಿ ಮಾಡಿದ್ದಾರೆ.


