ಮುಂಬೈ: 'ಲಗಾನ್', 'ಸರ್ಫರೋಷ್' ಹಾಗೂ 'ಗಜಿನಿ'ಯಂತಹ ಸೂಪರ್ ಹಿಟ್ ಸಿನಿಮಾಗಳ ಮೂಲಕ ಭಾರತೀಯ ಚಲನಚಿತ್ರ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಹಿರಿಯ ನಟ ಪ್ರದೀಪ್ ರಾವತ್ (74) ಅವರು ಮಂಗಳವಾರ ನಿಧನರಾಗಿದ್ದಾರೆ.
ಕಳೆದ ಕೆಲವು ಸಮಯದಿಂದ ರಕ್ತದ ಕ್ಯಾನ್ಸರ್‌ನಿಂದ (Blood Cancer) ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು . ಆರಂಭದಲ್ಲಿ ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ನಂತರ ಮತ್ತೊಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಅಲ್ಲಿಯೇ ಅವರು ಕೊನೆಯುಸಿರೆಳೆದಿದ್ದಾರೆ.
ಮಹಾಭಾರತ'ದ ಅಶ್ವತ್ಥಾಮನಿಂದ ಬೆಳ್ಳಿತೆರೆಯ ಯಶಸ್ಸಿನವರೆಗೆ
ಜನವರಿ 21, 1952 ರಂದು ಮಧ್ಯಪ್ರದೇಶದ ಜಬಲ್ಪುರದಲ್ಲಿ ಜನಿಸಿದ ಪ್ರದೀಪ್ ರಾವತ್ ಅವರು ಹಿಂದಿ ಚಿತ್ರರಂಗದ ಮೂಲಕ ತಮ್ಮ ನಟನಾ ಪಯಣವನ್ನು ಆರಂಭಿಸಿದರು.
ಬಿ.ಆರ್. ಚೋಪ್ರಾ ಅವರ ಐಕಾನಿಕ್ 'ಮಹಾಭಾರತ' ಧಾರಾವಾಹಿಯಲ್ಲಿ 'ಅಶ್ವತ್ಥಾಮ' ಪಾತ್ರವನ್ನು ಪೋಷಿಸುವ ಮೂಲಕ ಅವರು ದೇಶಾದ್ಯಂತ ಅಪಾರ ಪ್ರಸಿದ್ದಿ ಪಡೆದರು. ತದನಂತರ 1985 ರಲ್ಲಿ ತೆರೆಕಂಡ 'ಮೇರಿ ಜಂಗ್' ಸಿನಿಮಾ ಮೂಲಕ ಅವರು ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದರು.


