ಕಲಬುರಗಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಜಾರಿಯಲ್ಲಿರುವುದರಿಂದ ರೈತರ ಸಾಲಮನ್ನಾ ಮಾಡಲು ಸಾಧ್ಯವಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಕೆ. ಹರಿಪ್ರಸಾದ್ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿ ರಾಜ್ಯದ ತೀವ್ರ ಬರ ಪರಿಸ್ಥಿತಿ ಹಾಗೂ ರೈತರ ಸಾಲಮನ್ನಾ ಕುರಿತು ಮಾತನಾಡಿದ ಅವರು, ಸದ್ಯದ ಪರಿಸ್ಥಿತಿಯಲ್ಲಿ ಗ್ಯಾರಂಟಿ ಯೋಜನೆಗಳ ವೆಚ್ಚದ ನಡುವೆ ಸಾಲಮನ್ನಾ ಮಾಡಲು ಆಗುವುದಿಲ್ಲ.ಆದರೆ ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರದಿಂದ ಸೂಕ್ತ ರೀತಿಯಲ್ಲಿ ಅಗತ್ಯವಿರುವ ಎಲ್ಲ ನೆರವು ಹಾಗೂ ನೆರವು ನೀಡುವುದಾಗಿ ಭರವಸೆ ನೀಡಿದರು.
ಇದೇ ವೇಳೆ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ಕುರಿತು ಪ್ರಸ್ತಾಪಿಸಿದ ಅವರು, ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರ್ ಅವರು ಶಿಕ್ಷಣ ಕ್ಷೇತ್ರದಲ್ಲಿ ಹಾಗೂ ಶಿಕ್ಷಕರ ಹಿತರಕ್ಷಣೆಗೆ ಉತ್ತಮ ಕೆಲಸ ಮಾಡಿದ್ದಾರೆ. ಅವರ ಸಾಧನೆಗಳನ್ನು ಪರಿಗಣಿಸಿ ಈ ಬಾರಿಯ ಚುನಾವಣೆಯಲ್ಲಿ ಶಿಕ್ಷಕರು ನಮ್ಮ ಅಭ್ಯರ್ಥಿಗೆ ಮತ ನೀಡಿ ಬೆಂಬಲಿಸಬೇಕೆಂದು ಮನವಿ ಮಾಡಿದರು.
ಇನ್ನು ರಾಜ್ಯದಲ್ಲಿ ಮೂರನೇ ಸಿಎಂ ಬರುತ್ತಾರೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಹರಿಪ್ರಸಾದ್, "ವಿಜಯೇಂದ್ರ ಅವರು ತಿರುಕನ ಕನಸು ಕಾಣುತ್ತಿದ್ದಾರೆ. ನಮ್ಮ ೨೫ ಜನ ಶಾಸಕರು ಅವರ ಜೊತೆ ಬರುತ್ತಾರೆ ಎಂಬ ಭ್ರಮೆಯಲ್ಲಿದ್ದಾರೆ. ಹೀಗಾಗಿ ಮಾಧ್ಯಮಗಳ ಮುಂದೆ ಆಗಾಗ ಇಂತಹ ಆಧಾರರಹಿತ ಹೇಳಿಕೆಗಳನ್ನು ನೀಡುತ್ತಿರುತ್ತಾರೆ" ಎಂದು ವ್ಯಂಗ್ಯವಾಡಿದರು.


