ಹುಬ್ಬಳ್ಳಿ : "ಕೆಪಿಎಸ್ಸಿ ಹಗರಣ ಬಿಜೆಪಿಯ ಕೂಸು. ವಿದ್ಯಾರ್ಥಿಗಳು ಮತ್ತು ಪದವೀಧರರಿಗೆ ಅವರ ಅರ್ಹತೆಯ ಆಧಾರದ ಮೇಲೆ ಉದ್ಯೋಗ ದೊರೆಯಬೇಕು.
ಹಣದ ವ್ಯವಹಾರ, ಒತ್ತಡ ಅಥವಾ ಪ್ರಭಾವಕ್ಕೆ ಅವಕಾಶವಿಲ್ಲದ ನ್ಯಾಯಸಮ್ಮತ ಪರೀಕ್ಷಾ ವ್ಯವಸ್ಥೆಯನ್ನು ರೂಪಿಸುವುದು ಸರ್ಕಾರದ ಉದ್ದೇಶವಾಗಿದೆ" ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು.
ಹುಬ್ಬಳ್ಳಿಯ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ ಪ್ರಯುಕ್ತ ಶನಿವಾರ ಹಮ್ಮಿಕೊಂಡಿದ್ದ 'ಪದವೀಧರರೊಂದಿಗೆ ಸಂವಾದ ಸಭೆ'ಯಲ್ಲಿ ಮಾತನಾಡಿದರು.
"ನೀಟ್, ಎಸ್ಐ ಸೇರಿದಂತೆ ವಿವಿಧ ನೇಮಕಾತಿ ಮತ್ತು ಪರೀಕ್ಷಾ ವ್ಯವಸ್ಥೆಗಳಲ್ಲಿ ಹಗರಣಗಳ ಆರೋಪಗಳು ಕೇಳಿಬರುತ್ತಿವೆ.
ದೇಶದಲ್ಲಿ ಉದ್ಯೋಗದ ಸಮಸ್ಯೆ ತೀವ್ರವಾಗಿರುವ ಸಂದರ್ಭದಲ್ಲಿ ಪರೀಕ್ಷಾ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ಕಾಪಾಡುವುದು ಅತ್ಯಂತ ಮುಖ್ಯ" ಎಂದು ತಿಳಿಸಿದರು.
"ಕೆಪಿಎಸ್ಸಿ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರಿಗೆ ದೂರು ಸಲ್ಲಿಕೆಯಾದ ಬಳಿಕ ಸರ್ಕಾರವೂ ವರದಿ ತರಿಸಿಕೊಂಡು ಪರಿಶೀಲನೆ ನಡೆಸಿದೆ.
ಹಗರಣ ನಡೆದಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವ ಪ್ರಕ್ರಿಯೆಗೆ ಸರ್ಕಾರ ಸಹಕಾರ ನೀಡಿದೆ. ತನಿಖೆಯ ಮೂಲಕ ಸತ್ಯಾಂಶ ಹೊರಬರಬೇಕು ಎಂಬುದು ಸರ್ಕಾರದ ನಿಲುವು" ಎಂದು ಹೇಳಿದರು.


