ಕೋಲ್ಕತ್ತಾ: ನೇಪಾಲ ಮತ್ತು ಟಿಬೆಟ್ ಗಡಿ ಭಾಗದಲ್ಲಿ ಸಂಭವಿಸಿದ ದಿಢೀರ್ ಪ್ರವಾಹ ಹಾಗೂ ಪ್ರಕೃತಿ ವಿಕೋಪದಿಂದಾಗಿ ನೂರಾರು ಜನರು ನಾಪತ್ತೆಯಾಗಿದ್ದು, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮಾಜಿ ಶಾಸಕ ಸುಭ್ರಾಂಶು ರಾಯ್ ಅವರ ಪತ್ನಿ, ಮಾಜಿ ಕೇಂದ್ರ ರೈಲ್ವೆ ಸಚಿವ (ದಿವಂಗತ) ಮುಕುಲ್ ರಾಯ್ ಅವರ ಸೊಸೆ ಶರ್ಮಿಷ್ಠಾ ಭೌಮಿಕ್ ರಾಯ್ ನಾಪತ್ತೆಯಾಗಿದ್ದಾರೆ.
ಶರ್ಮಿಷ್ಠಾ ಅವರು ಆಗಸ್ಟ್ 21 ರಂದು ಪಶ್ಚಿಮ ಬಂಗಾಳದಿಂದ ಟ್ರಾವೆಲ್ಲಿಂಗ್ ಏಜೆನ್ಸಿ ಮೂಲಕ ಕೈಲಾಸ ಮಾನಸಸರೋವರ ಮತ್ತು ನೇಪಾಳ ಪ್ರವಾಸಕ್ಕೆ ತೆರಳಿದ್ದರು ಎನ್ನಲಾಗಿದೆ.
ಮಂಗಳವಾರ ರಾತ್ರಿ ಕೊನೆಯ ಬಾರಿಗೆ ತಮ್ಮ ಪತಿ ಶುಭ್ರಾಂಶು ರಾಯ್ ಅವರೊಂದಿಗೆ ಫೋನ್‌ನಲ್ಲಿ ಮಾತನಾಡಿದ್ದರು. ಆದರೆ ಬುಧವಾರ ಬೆಳಿಗ್ಗೆ ನೇಪಾಳ-ಚೀನಾ ಗಡಿ ಭಾಗದಲ್ಲಿ ಪ್ರವಾಹ ಉಂಟಾದ ನಂತರ ಅವರ ಫೋನ್ ಸಂಪರ್ಕ ಕಡಿತಗೊಂಡಿದೆ.
ಇದೇ ವೇಳೆ, ಕೋಲ್ಕತ್ತಾದಿಂದ ಕೈಲಾಸ-ಮಾನಸ ಸರೋವರ ಯಾತ್ರೆಗೆ ತೆರಳಿದ್ದ 32 ಸದಸ್ಯರ ತಂಡವೂ ನಾಪತ್ತೆಯಾಗಿದೆ. ಈ ತಂಡದಲ್ಲಿ 30 ಪ್ರವಾಸಿಗರು ಹಾಗೂ ಇಬ್ಬರು ವ್ಯವಸ್ಥಾಪಕರು ಇದ್ದರು. ಆಗಸ್ಟ್ 21ರಂದು ಕೋಲ್ಕತ್ತಾದಿಂದ ಹೊರಟ ತಂಡ ಮರುದಿನ ನೇಪಾಳ ತಲುಪಿತ್ತು.
ಬುಧವಾರ ಬೆಳಗ್ಗೆ ನೇಪಾಳ-ಟಿಬೆಟ್ ಗಡಿಯ ಸಮೀಪದ ರಸುವಾಗಢಿಗೆ ತಂಡ ತಲುಪಿದ್ದು, ಬೆಳಗ್ಗೆ ಸುಮಾರು 8.30ರ ವೇಳೆಗೆ ಅಲ್ಲಿನ ವಲಸೆ ಕಚೇರಿಯಲ್ಲಿತ್ತು. ಈ ವೇಳೆ ಹಠಾತ್ ಪ್ರವಾಹ ಸಂಭವಿಸಿದೆ.


