ಕಾನ್ಪುರ : ತರಬೇತಿ ವಿಮಾನವೊಂದು ಹಾರಾಟ ಆರಂಭಿಸಿದ 20 ನಿಮಿಷದಲ್ಲಿ ಕ್ರ್ಯಾಶ್ ಆಗಿ ನೆಲಕ್ಕಪ್ಪಳಿಸಿ ಇಬ್ಬರು ಪೈಟಲ್‌ಗಳ ಸಾವಿಗೆ ಕಾರಣವಾದ ಘಟನೆ ಗಂಗಾ ನದಿಯ ತಟದಲ್ಲಿರುವ ಕತ್ರಿ ಎಂಬಲ್ಲಿ ನಡೆದಿದೆ. ತರಬೇತಿ ಪಡೆಯುತ್ತಿದ್ದ ಕನ್ನಡಿಗ ಅಭಿಷೇಕ್ ಪೂಜಾರಿ ಹಾಗೂ ತರಬೇತುದಾರ ಗುಜರಾತ್‌ನ ಸಚಿನ್ ಭಾಟಿಯಾ ಮೃತರು.
2023ರಲ್ಲಿ ಗಾರ್ಗ್ ಏವಿಯೇಷನ್‌ಗೆ ಸೇರ್ಪಡೆಗೊಂಡಿದ್ದ ಟೆಕ್ನಾಮ್ ಪಿ2006ಟಿ ವಿಮಾನವು ಬೆಳಗ್ಗೆ 11.30ರ ಸುಮಾರಿಗೆ ಟೇಕ್‌ಆಫ್ ಆಗಿತ್ತು. ಅದಾದ 20 ನಿಮಿಷಗಳಲ್ಲೇ ಕಾನ್ಪುರ ಸಿವಿಲ್ ವಿಮಾನ ನಿಲ್ದಾಣದಿಂದ 5 ನಾಟಿಕಲ್ ಮೈಲು ದೂರದಲ್ಲಿ ದುರ್ಘಟನೆಗೆ ತುತ್ತಾಗಿದೆ.
ಪರಿಣಾಮ ಇಡೀ ವಿಮಾನ ಛಿದ್ರವಾಗಿ, ಅದರ ಭಾಗಗಳು ಸುಟ್ಟು ಬಿದ್ದಿವೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ, ಪೈಟಲ್‌ಗಳ ಮೃತದೇಹಗಳನ್ನು ಅಲ್ಲಿಂದ ತೆಗೆದ ಬಳಿಕ ಸಾಕ್ಷ್ಯಗಳನ್ನು ಕಾಪಾಡುವ ಉದ್ದೇಶದಿಂದ ಆ ಸ್ಥಳವನ್ನು ಸೀಲ್ ಮಾಡಿದರು.
ಪ್ರಾಥಮಿಕ ಮಾಹಿತಿಯ ಪ್ರಕಾರ ಅದು 2 ಎಂಜಿನ್‌ಗಳನ್ನು ಹೊಂದಿದ್ದ 4 ಸೀಟುಗಳ ವಿಮಾನವಾಗಿತ್ತು.
ಅಪಘಾತದ ವೇಳೆ ಪೈಲಟ್‌ಗಳು ಪಾರಾಗಲು ಯತ್ನಿಸಿದ್ದರೇ ಎಂಬುದು ಸ್ಪಷ್ಟವಿಲ್ಲ. ವಿಮಾನಯಾನ ಮಹಾನಿರ್ದೇಶನಾಲಯದ (ಡಿಜಿಸಿಎ) 3 ಸಿಬ್ಬಂದಿಯ ತಂಡವು ಈ ವಿಮಾನದ ಹಾರಾಟದ ಅರ್ಹತೆ, ನಿರ್ವಹಣಾ ದಾಖಲೆಗಳು ಮತ್ತು ಇತರ ತಾಂತ್ರಿಕ ಅಂಶಗಳನ್ನು ಪರಿಶೀಲಿಸಲಿದೆ.


