LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಶಿಕ್ಷಣ ಕ್ಷೇತ್ರವನ್ನು ನಿರ್ಲಕ್ಷಿಸಿದ ಸರ್ಕಾರ : ಶಾಸಕ ಎಂ.ಟಿ.ಕೃಷ್ಣಪ್ಪ ಆರೋಪ

Advertisement

ತುರುವೇಕೆರೆ : ರಾಜ್ಯದಲ್ಲಿನ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ತೀವ್ರವಾಗಿದ್ದು, ಸರ್ಕಾರ ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣವಾಗಿ  ನಿರ್ಲಕ್ಷಿಸಿದೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಆರೋಪಿಸಿದರು.ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯ್ತಿ, ಶಾಲಾ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ 139 ಜಯಂತ್ಯೋತ್ಸವ, ಶಿಕ್ಷಕರ ದಿನಾಚರಣೆ, ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ಸುಮಾರು 50 ರಿಂದ 60ಸಾವಿರ ಶಿಕ್ಷಕರ ಕೊರತೆಯಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳಾಗಿದೆ. ಪ್ರತಿ ವರ್ಷ 15ಸಾವಿರ ಶಿಕ್ಷಕರ ನೇಮಕಾತಿ ಮಾಡುತ್ತೇವೆಂದು ಘೋಷಣೆ ಮಾಡುತ್ತಲೇ ಇದೆಯೇ ಹೊರತು ಶಿಕ್ಷಕರ ನೇಮಕಾತಿ ಮಾಡಿಲ್ಲ. ಇದರಿಂದಾಗಿ ಮಕ್ಕಳ ಭವಿಷ್ಯದ ಬಗ್ಗೆ ಚಿಂತಾಕ್ರಾಂತರಾಗಿರುವ ಪೋಷಕರು ಖಾಸಗಿ ಶಾಲೆಗಳತ್ತ ಮುಖಮಾಡುತ್ತಿದ್ದಾರೆ. ಸರ್ಕಾರಿ ಶಾಲೆಗಳು ಮುಚ್ಚುವಂತಾಗಿದೆ. ಈ ವರ್ಷ 8500 ಶಿಕ್ಷಕರು ನಿವೃತ್ತರಾಗಲಿದ್ದು, ಶಿಕ್ಷಕರ ಕೊರತೆ ಮತ್ತಷ್ಟು ಹೆಚ್ಚಾಗಲಿದೆ. ಖಾಯಂ ಶಿಕ್ಷಕರ ನೇಮಕಾತಿ ಮಾಡದ ಸರ್ಕಾರ ಅತಿಥಿ ಶಿಕ್ಷಕರನ್ನು ನೇಮಿಸಿ ಕಾಲಹರಣ ಮಾಡುತ್ತಿದೆ. ಅತಿಥಿ ಶಿಕ್ಷಕರಿಗೆ ನೀಡುವ 15ಸಾವಿರ ಗೌರವಧನ ಅವರ ಬಸ್ ಶುಲ್ಕಕ್ಕೂ ಸಾಕಾಗುವುದಿಲ್ಲ. ಇನ್ನು ಅವರು ಬದುಕು ಸಾಗಿಸುವುದು ಹೇಗೆ? ಕೂಡಲೇ ಸರ್ಕಾರ ಶಿಕ್ಷಕರ ನೇಮಕಾತಿ ಮಾಡಬೇಕು ಹಾಗೂ 5 ವರ್ಷಕ್ಕೂ ಅಧಿಕ ಕಾಲ ಅತಿಥಿ ಶಿಕ್ಷಕರಾಗಿ ಕಾರ್ಯನಿರ್ವಹಿಸಿದವರನ್ನು ಕ್ರಮಬದ್ಧಗೊಳಿಸಿ ಆದೇಶಿಸಬೇಕೆಂದು ಒತ್ತಾಯಿಸಿದರು.
news_1788595035_0_710.webp

 

ಪ್ರಜೆಗಳ ಸೇವೆ ಮಾಡುವುದಕ್ಕೆ ಯಾವುದೇ ಯೋಜನೆಯ ಅಗತ್ಯವಿಲ್ಲ. ಜನಪ್ರತಿನಿಧಿಗಳಾಗಲೀ, ಸರ್ಕಾರಿ ಅಧಿಕಾರಿಗಳಾಗಲೀ ಮಾಡುತ್ತಿರುವುದು ಜನಸೇವಯೇ. ಹಿಂದಿನ ಸರ್ಕಾರಗಳಿದ್ದಾಗ ಇದ್ದಂತಹ ಅಧಿಕಾರಿ ವರ್ಗವೇ ಈಗಲೂ ಇದೆ. ಹೊಸತೇನೂ ಇಲ್ಲ. ಆದರೆ ಸರ್ಕಾರ ಮಾತ್ರ ಬದಲಾಗಿದೆ. ನನ್ನ ಅಧಿಕಾರವಿದೆ, ನಾನೊಂದು ಯೋಜನೆ ಜಾರಿಗೊಳಿಸಬೇಕೆಂಬ ಉದ್ದೇಶದಿಂದ ಯೋಜನೆ ಜಾರಿಗೊಳಿಸಬಾರದು. ಸರ್ಕಾರ ಪ್ರಜಾಸೇವೆ ಆಂದೋಲನ ಜಾರಿಗೊಳಿಸಿದೆ. ಜನಗಳ ಸೇವೆ ಮಾಡಲು, ರಾಜ್ಯದ ಅಭಿವೃದ್ದಿ ಮಾಡಲು ಇಚ್ಛಾಶಕ್ತಿ ಇರಬೇಕೇ ವಿನಃ ಹೊಸ ಯೋಜನೆಗಳಲ್ಲ ಎಂದರು.

ತಾಲ್ಲೂಕಿನ ಶಿಕ್ಷಣಾಧಿಕಾರಿಗಳು ಮತ್ತು ಶಿಕ್ಷಕರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಕಳೆದ ಬಾರಿ ಎಸ್.ಎಸ್.ಎಲ್.ಸಿ.ಯಲ್ಲಿ ತುರುವೇಕೆರೆ ತಾಲ್ಲೂಕು ಜಿಲ್ಲೆಗೆ ಎರಡನೇ ಸ್ಥಾನ ಪಡೆದಿದೆ. ಮುಂದಿನ ಬಾರಿ ಪ್ರಥಮ ಸ್ಥಾನ ಬರುವಂತೆ ಮಾಡುವ ನಿಟ್ಟಿನಲ್ಲಿ ಶಿಕ್ಷಕರು ಕಾರ್ಯೋನ್ಮುಖರಾಗಬೇಕು. ಪ್ರತಿಯೊಂದು ಕ್ಷೇತ್ರದಲ್ಲೂ ಜಾತಿ ರಾಜಕೀಯದ ವಾಸನೆ ಇದೆ. ಆದರೆ ಶಿಕ್ಷಕರಲ್ಲಿ ಜಾತಿಭೇದವಿಲ್ಲ. ಗುರು ಶಿಷ್ಯರ ಸಂಬಂಧದಲ್ಲಿ ಜಾತಿಯ ಸೋಂಕಿಲ್ಲ. ತನ್ನ ವಿದ್ಯಾರ್ಥಿ ಉತ್ತಮ ಸಾಧನೆ ಮಾಡಲಿ ಎನ್ನುವುದಷ್ಟೇ ಶಿಕ್ಷಕರ ಆಶಯವಾಗಿರುತ್ತದೆ. ಆ ಕಾರಣಕ್ಕೆ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಡಾ.ರಾಧಾಕೃಷ್ಣನ್ ಅವರ ಸೇವೆ, ಗುಣ, ಆದರ್ಶ ಸ್ಮರಣೀಯವಾದುದು ಎಂದ ಅವರು, ನಿವೃತ್ತ ಶಿಕ್ಷಕರಿಗೆ ಸರ್ಕಾರ ಅಥವಾ ಇಲಾಖೆಯಿಂದ ದೊರೆಯಬೇಕಾದ ಸವಲತ್ತುಗಳನ್ನು ಕೂಡಲೇ ದೊರೆಯುವಂತೆ ಶಿಕ್ಷಣಾಧಿಕಾರಿಗಳು ಕ್ರಮಕೈಗೊಳ್ಳುವಂತೆ ಸೂಚಿಸಿದರು.

ಸಮಾರಂಭಕ್ಕೂ ಮುನ್ನ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರವನ್ನು ಕ್ಷೇತ್ರಶಿಕ್ಷಣಾಧಿಕಾರಿ ಕಛೇರಿಯಿಂದ ಕಾಲೇಜಿನವರೆಗೆ ಮೆರವಣಿಗೆ ಮಾಡಲಾಯಿತು. ಡಾ.ರಾಧಾಕೃಷ್ಣನ್, ಸಾವಿತ್ರಿಬಾಯುಫುಲೆ ಅವರ ಭಾವಚಿತ್ರಕ್ಕೆ  ಪುಷ್ಪನಮನ ಸಲ್ಲಿಸಲಾಯಿತು. ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಮಾದಿಹಳ್ಳಿ ರಾಮಕೃಷ್ಣಮಠದ ಅಧ್ಯಕ್ಷರಾದ ಶ್ರೀಮದ್ ಸ್ವಾಮಿ ತದ್ಯುಕ್ತಾನಂದಾಜೀ ದಿವ್ಯ ಸಾನಿದ್ಯ ವಹಿಸಿದ್ದರು. ಮಧುಗಿರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಗೋವಿಂದರಾಯ ಮುಖ್ಯ ಭಾಷಣ ಮಾಡಿದರು. ನಿವೃತ್ತ ಶಿಕ್ಷಕರನ್ನು ಗೌರವಿಸಲಾಯಿತು. ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
news_1788595045_0_248.webp

 

ಸಮಾರಂಭದಲ್ಲಿ ತಹಸೀಲ್ದಾರ್ ಕುಂಇ ಅಹಮದ್, ಬಿಇಒ ಸೋಮಶೇಖರ್, ಇಒ ಅನಂತರಾಜು, ಕಾಲೇಜಿನ ಪ್ರಾಂಶುಪಾಲ ವಿ.ಎನ್. ನಂಜೇಗೌಡ, ಪತ್ರಾಂಕಿತ ವ್ಯವಸ್ಥಾಪಕ ಕೃಷ್ಣಪ್ರಸಾದ್, ಅಕ್ಷರದಾಸೋಹ ಸಹಾಯಕ ನಿರ್ದೇಶಕಿ ಸವಿತ, ಉಪಪ್ರಾಂಶುಪಾಲ ವೆಂಕಟೇಶ್, ಬಿಆರ್.ಸಿ. ಸುರೇಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪಾಪಣ್ಣ, ಕಸಾಪ ಅಧ್ಯಕ್ಷ ಡಿ.ಪಿ.ರಾಜು, ಜಿಲ್ಲಾ ಪ್ರಾ.ಶಾ.ಶಿ.ಸಂಘದ ಗೌರವಾಧ್ಯಕ್ಷ ಷಣ್ಮುಖಪ್ಪ, ಪ್ರಾ.ಶಾ.ಶಿ.ಸಂಘದ ಅಧ್ಯಕ್ಷೆ ಭವ್ಯ, ಲಯನ್ಸ್ ಅಧ್ಯಕ್ಷ ಸುನಿಲ್ ಬಾಬು ಸೇರಿದಂತೆ ಶಿಕ್ಷಕ ವೃಂದ ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST