ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿ ನಗರದ ನೂತನ ಪೊಲೀಸ್ ಆಯುಕ್ತ ಭೂಷಣ್ ಬೋರಸೆ ಅವರು ಅಧಿಕಾರ ಸ್ವೀಕರಿಸುವ ವೇಳೆ ಮಾದಕವಸ್ತು ಸಾಗಾಟ ಹಾಗೂ ಕೊಲೆ ಪ್ರಕರಣದ ಆರೋಪಿಗಳು ಸನ್ಮಾನ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ. ಆರೋಪಿಗಳು ಆಯುಕ್ತರಿಗೆ ಹೂಗುಚ್ಛ ನೀಡಿ ಸನ್ಮಾನ ಮಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಮಾದಕವಸ್ತು ಸಾಗಾಟಕ್ಕೆ ಸಂಬಂಧಿಸಿದ ಎನ್‌ಡಿಪಿಎಸ್ ಪ್ರಕರಣದ ಆರೋಪಿ ಖೇತ್‌ಸಿಂಗ್ ರಾಜಪುರೋಹಿತ್ ಅವರು ಆಯುಕ್ತ ಭೂಷಣ್ ಬೋರಸೆ ಅವರನ್ನು ಸನ್ಮಾನಿಸಿದ್ದಾರೆ ಎನ್ನಲಾಗಿದೆ. ಇದರ ಜೊತೆಗೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಅಮಿತ್ ಬದ್ದಿಯೂ ಆಯುಕ್ತರಿಗೆ ಹೂಗುಚ್ಛ ನೀಡಿ ಸನ್ಮಾನ ಮಾಡಿರುವ ಫೋಟೋ ವೈರಲ್ ಆಗಿದೆ.
ನೂತನ ಪೊಲೀಸ್ ಆಯುಕ್ತರು ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲೇ ಆರೋಪಿತ ಹಿನ್ನೆಲೆಯುಳ್ಳ ವ್ಯಕ್ತಿಗಳು ಆಯುಕ್ತರ ಕಚೇರಿಗೆ ಪ್ರವೇಶಿಸಿ ಸನ್ಮಾನ ಮಾಡಿರುವುದು ಹೇಗೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.


