ಮಾನ್ವಿ: ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯ ವಿದ್ಯಾರ್ಥಿನಿಲಯಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ, ಸಮರ್ಪಕ ಊಟದ ಅಭಾವ, ಕುಡಿಯುವ ನೀರಿನ ಸಮಸ್ಯೆ ಹಾಗೂ ಕಟ್ಟಡದ ದುಸ್ಥಿತಿಯನ್ನು ಖಂಡಿಸಿ ವಿದ್ಯಾರ್ಥಿಗಳು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿ ಪ್ರತಿಭಟನೆ ಮಾಡಿದರು.
ವಿದ್ಯಾರ್ಥಿನಿಲಯಗಳಲ್ಲಿ ಗುಣಮಟ್ಟದ ಊಟ, ಸಮರ್ಪಕ ಕುಡಿಯುವ ನೀರು, ಮಂಚ–ಹಾಸಿಗೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ತಕ್ಷಣ ಕಲ್ಪಿಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು. ವಿದ್ಯಾರ್ಥಿಗಳ ಮನವಿಯ ವೇಳೆ ತಾಲೂಕು ಪಂಚಾಯಿತಿ ಅಧಿಕಾರಿಗಳು ಸ್ಥಳದಲ್ಲಿ ಗೈರುಹಾಜರಾಗಿದ್ದರು ಎಂದು ಪ್ರತಿಭಟನಾಕಾರರು ಆರೋಪಿಸಿದರು.
ವಿದ್ಯಾರ್ಥಿನಿಲಯದಲ್ಲಿ ಸಮಯಕ್ಕೆ ಸರಿಯಾಗಿ ಗುಣಮಟ್ಟದ ಊಟ ದೊರೆಯುತ್ತಿಲ್ಲ. ಮಲಗಲು ಅಗತ್ಯವಾದ ಮಂಚ ಹಾಗೂ ಹಾಸಿಗೆಗಳ ಕೊರತೆಯೂ ಇದೆ. ಇದರಿಂದ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದು, ಶೈಕ್ಷಣಿಕ ವಾತಾವರಣಕ್ಕೂ ಧಕ್ಕೆಯಾಗುತ್ತಿದೆ ಎಂದು ವಿದ್ಯಾರ್ಥಿಗಳು ದೂರಿದರು.
ಕುಡಿಯುವ ನೀರಿನ ಸಮಸ್ಯೆಯೂ ಗಂಭೀರವಾಗಿದೆ. ಪ್ರಸ್ತುತ ದಿನಕ್ಕೆ ಒಂದು ಟ್ಯಾಂಕರ್ ನೀರು ಮಾತ್ರ ಪೂರೈಸಲಾಗುತ್ತಿದ್ದು, ಅದು ವಿದ್ಯಾರ್ಥಿಗಳ ಅಗತ್ಯಕ್ಕೆ ಸಾಕಾಗುತ್ತಿಲ್ಲ. ಹೀಗಾಗಿ ದಿನಕ್ಕೆ ಕನಿಷ್ಠ ಮೂರು ಟ್ಯಾಂಕರ್ ನೀರು ಪೂರೈಸಬೇಕು ಎಂದು ಒತ್ತಾಯಿಸಿದರು.
ವಿದ್ಯಾರ್ಥಿನಿಲಯದ ಮೇಲ್ಛಾವಣಿ ಹಾಳಾಗಿದ್ದು, ಕುಸಿಯುವ ಅಪಾಯ ಎದುರಾಗಿದೆ. ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಟ್ಟಡವನ್ನು ತಕ್ಷಣ ಪರಿಶೀಲಿಸಿ ದುರಸ್ತಿ ಮಾಡಬೇಕು. ಅಲ್ಲದೆ, ಅಡುಗೆ ಸಹಾಯಕರನ್ನು ನೇಮಿಸಿ ಊಟದ ವ್ಯವಸ್ಥೆಯನ್ನು ಸುಧಾರಿಸಬೇಕು ಹಾಗೂ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.
ಪ್ರತಿಭಟನೆಯ ಬಳಿಕ ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿಗಳು ಹಾಗೂ ಇಲಾಖೆಯ ಸೂಪರಿಂಟೆಂಡೆಂಟ್ ರೂಪಾ ಅವರು ವಿದ್ಯಾರ್ಥಿಗಳ ಮನವಿ ಆಲಿಸಿ ಸಮಸ್ಯೆಗಳ ಕುರಿತು ಮಾಹಿತಿ ಪಡೆದರು. ಮೂಲಸೌಕರ್ಯ, ಕುಡಿಯುವ ನೀರು, ಊಟದ ವ್ಯವಸ್ಥೆ, ಮಂಚ–ಹಾಸಿಗೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಒಂದು ವಾರದೊಳಗೆ ಬಗೆಹರಿಸುವುದಾಗಿ ಲಿಖಿತ ಭರವಸೆ ನೀಡಿದರು.
ಅಧಿಕಾರಿಗಳ ಭರವಸೆ ನಿಗದಿತ ಅವಧಿಯಲ್ಲಿ ಈಡೇರಲಿದೆಯೇ ಎಂಬುದು ಈಗ ವಿದ್ಯಾರ್ಥಿಗಳಲ್ಲಿ ಕುತೂಹಲ ಮೂಡಿಸಿದೆ. ವಿದ್ಯಾರ್ಥಿಗಳ ಶಿಕ್ಷಣ, ಆರೋಗ್ಯ ಮತ್ತು ಸುರಕ್ಷತೆಗೆ ಅಗತ್ಯವಾದ ಸೌಲಭ್ಯಗಳನ್ನು ಶೀಘ್ರದಲ್ಲಿ ಕಲ್ಪಿಸಿ, ನೆಮ್ಮದಿಯ ವಾತಾವರಣದಲ್ಲಿ ವಿದ್ಯಾಭ್ಯಾಸ ಮಾಡಲು ಅವಕಾಶ ಮಾಡಿಕೊಡಬೇಕು ಎಂಬುದು ವಿದ್ಯಾರ್ಥಿಗಳ ಒತ್ತಯವಾಗಿದೆ.
ವರದಿ :ಆಂಜನೇಯ ನಸಲಾಪುರ


