ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರಾದ ಯು.ಟಿ. ಖಾದರ್ ಅವರ ನಿರ್ದೇಶನದಂತೆ, ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ವತಿಯಿಂದ ರಾಜ್ಯಾದ್ಯಂತ ಸಿಹಿ ತಿಂಡಿ ತಯಾರಿಕಾ ಹಾಗೂ ಮಾರಾಟ ಮಳಿಗೆಗಳ ಮೇಲೆ ವ್ಯಾಪಕ ವಿಶೇಷ ತಪಾಸಣಾ ಕಾರ್ಯಾಚರಣೆ ನಡೆಸಲಾಗಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ಹಾಗೂ 2011ರ ಪರವಾನಗಿ ಮತ್ತು ನೋಂದಣಿ ನಿಯಮಗಳ ಅಡಿಯಲ್ಲಿ ಈ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ಒಟ್ಟು 80 ಮಳಿಗೆಗಳನ್ನು ಅಧಿಕಾರಿಗಳ ತಂಡ ಕೂಲಂಕಷವಾಗಿ ಪರಿಶೀಲಿಸಿದೆ.
ಪ್ರಯೋಗಾಲಯಕ್ಕೆ 125 ಆಹಾರ ಮಾದರಿಗಳ ರವಾನೆ
ವಿಶೇಷ ತಪಾಸಣೆಯ ಅವಧಿಯಲ್ಲಿ ಅಧಿಕಾರಿಗಳು ವಿವಿಧ ಸಿಹಿ ತಿಂಡಿ ತಯಾರಿಕಾ ಮತ್ತು ಮಾರಾಟ ಮಳಿಗೆಗಳಿಂದ ಒಟ್ಟು 125 ಆಹಾರ ಪದಾರ್ಥಗಳ ಮಾದರಿಗಳನ್ನು ಸಂಗ್ರಹಿಸಿದ್ದಾರೆ.
ಈ ಸಿಹಿತಿಂಡಿಗಳ ಗುಣಮಟ್ಟ, ಶುದ್ಧತೆ ಹಾಗೂ ಆಹಾರ ಸುರಕ್ಷತಾ ಮಾನದಂಡಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ, ಎಲ್ಲಾ ಮಾದರಿಗಳನ್ನು ತಕ್ಷಣವೇ ವಿಶ್ಲೇಷಣೆಗಾಗಿ ಸಂಬಂಧಪಟ್ಟ ಸರ್ಕಾರಿ ಆಹಾರ ಪ್ರಯೋಗಾಲಯಗಳಿಗೆ ಕಳುಹಿಸಿಕೊಡಲಾಗಿದೆ.


