ತುರುವೇಕೆರೆ : ವಿಧಾನಪರಿಷತ್ತಿನಲ್ಲಿ ಶೈಕ್ಷಣಿಕ ಕೇತ್ರ ಹಾಗೂ ಪದವೀಧರರ ಸಮಸ್ಯೆಗಳಿಗೆ ಸಮರ್ಥವಾಗಿ ಧ್ವನಿ ಎತ್ತಲು ಪ್ರಜ್ಞಾವಂತ ಮತದಾರರು ಎನ್.ಡಿ.ಎ. ಅಭ್ಯರ್ಥಿ ಕೆ.ಎಂ. ಸುರೇಶ್ ಅವರಿಗೆ ಮತ ನೀಡಿ ಆರ್ಶೀವದಿಸಬೇಕೆಂದು ಕೇಂದ್ರ ಸಚಿವ ವಿ.ಸೋಮಣ್ಣ ಮನವಿ ಮಾಡಿದರು.
ಪಟ್ಟಣದ ವಿರಕ್ತಮಠದಲ್ಲಿ ಬಿಜೆಪಿ, ಜೆಡಿಎಸ್ ನ ಎನ್.ಡಿ.ಎ. ಮೈತ್ರಿಕೂಟ ಆಯೋಜಿಸಿದ್ದ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯ ಜಂಟಿ ಪ್ರಚಾರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ದೇಶ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ, ಮಾಜಿ ಪ್ರಧಾನಿ ದೇವೇಗೌಡರ ಅನುಭವದ ಸಹಕಾರದಲ್ಲಿ ಅಭಿವೃದ್ದಿಯಲ್ಲಿ ಮುನ್ನಡೆಯುತ್ತಿದೆ. ಇದನ್ನು ಸಹಿಸದ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡುವಂತಹ ನಿರಾಧಾರ ಹೋರಾಟಗಳನ್ನು ನಡೆಸುತ್ತಿದ್ದಾರೆ. ಇದಕ್ಕೆಲ್ಲಾ ಮತದಾರರು ಚುನಾವಣೆಯಲ್ಲಿ ಸಮರ್ಥ ವ್ಯಕ್ತಿಯನ್ನು ಆಯ್ಕೆ ಮಾಡುವ ಮೂಲಕ ತಕ್ಕ ಉತ್ತರ ನೀಡಬೇಕಿದೆ ಎಂದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಎಲ್ಲಿಂದಲೋ ಬಂದ ನನ್ನನ್ನು ಅಪ್ಪಿ ಆರ್ಶೀವದಿಸಿದ ಜಿಲ್ಲೆಯ ಜನರ ಋಣವನ್ನು ಮರೆಯುವುದಿಲ್ಲ. ಎನ್.ಡಿ.ಎ. ಮೈತ್ರಿಕೂಟದ ರಾಷ್ಟ್ರೀಯ, ರಾಜ್ಯ ನಾಯಕರು ತುಮಕೂರು ಕ್ಷೇತ್ರದ ಅಭ್ಯರ್ಥಿ ಯಾರಾಗಬೇಕೆಂದಾಗ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ನನ್ನ ಹೆಸರನ್ನು ಸೂಚಿಸಿ ನಾನು ಸಂಸದ, ಕೇಂದ್ರದಲ್ಲಿ ಸಚಿವನಾಗಿ ಜನಸೇವೆ ಮಾಡಲು ಸಹಕರಿಸಿದರು. ಶಾಸಕ ಎಂ.ಟಿ.ಕೃಷ್ಣಪ್ಪ, ಮಾಜಿ ಶಾಸಕರಾದ ಎಂ.ಡಿ.ಲಕ್ಷ್ಮೀನಾರಾಯಣ್, ಮಸಾಲಾ ಜಯರಾಮ್ ಹಾಗೂ ಎನ್.ಡಿ.ಎ. ಮೈತ್ರಿ ಪಕ್ಷದ ಕಾರ್ಯಕರ್ತರು ಶ್ರಮವಹಿಸಿದ್ದರಿಂದಲೇ ಜಿಲ್ಲೆಯಲ್ಲೇ ಅತಿ ಹೆಚ್ಚು ಮತಗಳು ತುರುವೇಕೆರೆ ಕ್ಷೇತ್ರದಲ್ಲಿ ದೊರಕಿದ್ದವು ಎಂದ ಅವರು, ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕ್ಷೇತ್ರದಲ್ಲಿರುವ ಪದವೀಧರ ಮತದಾರರಿಗೆ ರಾಜ್ಯ ಸರ್ಕಾರದ ವೈಪಲ್ಯಗಳು, ಕೇಂದ್ರ ಸರ್ಕಾರದ ಸಾಧನೆಗಳನ್ನು ತಿಳಿಸಿ ಮತಯಾಚಿಸಿ. ಕೆ.ಎಂ.ಸುರೇಶ್ ಅವರ ಗೆಲುವು ಮುಂಬರುವ ಚುನಾವಣೆಗಳಿಗೆ ದಿಕ್ಸೂಚಿಯಾಗಲಿದ್ದು, ಸರ್ಕಾರಕ್ಕೆ ಎಚ್ಚರಿಕೆಯ ಗಂಟೆಯಾಗಲಿದೆ ಎಂದರು.
ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಎನ್.ಡಿ.ಎ. ಅಭ್ಯರ್ಥಿ ಕೆ.ಎಂ.ಸುರೇಶ್ ಅವರಿಗೆ ಮತದಾರರು ಪ್ರಥಮ ಪ್ರಾಶಸ್ತ್ಯ ದ ಮತ ನೀಡಿ ಗೆಲುವಿಗೆ ಸಹಕಾರ ನೀಡಬೇಕಿದೆ. ಜೆಡಿಎಸ್ ಪಕ್ಷದಿಂದ ಈಗಾಗಲೇ ಹೋಬಳಿಗೆ ಒಂದರಂತೆ ನಾಲ್ಕು ತಂಡಗಳನ್ನು ರಚಿಸಿ ಮತದಾರರ ಮನೆಮನೆಗೆ ತೆರಳಿ ಮತಯಾಚಿಸಲಾಗುತ್ತಿದೆ. ತಾಲ್ಲೂಕಿನಲ್ಲಿರುವ ಮತಗಳ ಪೈಕಿ ಶೇ.95ರಷ್ಟು ಮತಗಳನ್ನು ಎನ್.ಡಿ.ಎ. ಅಭ್ಯರ್ಥಿ ಸುರೇಶ್ ಅವರಿಗೆ ಕೊಡಿಸುವ ನಿಟ್ಟಿನಲ್ಲಿ ಎರಡೂ ಪಕ್ಷದ ಮುಖಂಡರು, ಕಾರ್ಯಕರ್ತರು ಕಾರ್ಯನಿರ್ವಹಿಸಬೇಕೆಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ್ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಅನೀತಿ, ಭ್ರಷ್ಟಾಚಾರ, ದುರಾಡಳಿತದ ಬಗ್ಗೆ ರಾಜ್ಯದ ಜನತೆ ಬೇಸತ್ತಿದ್ದಾರೆ. ಶಿಕ್ಷಣ ಕ್ಷೇತ್ರ ಹಾಗೂ ಪದವೀಧರ ಯುವಕರ ಸಮಸ್ಯೆಗಳು ಹೆಚ್ಚಿದೆ. ತಾಪಂ, ಜಿಪಂ ಚುನಾವಣೆಯನ್ನು ಎದುರಿಸಲು ಹೆದರಿರುವ ಕಾಂಗ್ರೆಸ್ ಚುನಾವಣೆ ಮುಂದೂಡಲು ತಂತ್ರ ರೂಪಿಸುತ್ತಿದೆ. ಈಗ ನಡೆಯುತ್ತಿರುವ ನಾಲ್ಕು ವಿಧಾನಪರಿಷತ್ ಚುನಾವಣೆ ಮತ್ತು ಮುಂದಿನ ತಾಪಂ, ಜಿಪಂ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ನಾವುಗಳು ಗೆದ್ದರೆ 2028ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಎನ್.ಡಿ.ಎ. ಮೈತ್ರಿಕೂಟದ ಸರ್ಕಾರ ಬರುವುದು ಖಚಿತ ಎಂದರು.
ಮಾಜಿ ಶಾಸಕ ಮಸಾಲಾ ಜಯರಾಮ್ ಮಾತನಾಡಿ, ಆಗ್ನೇಯ ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿ ಕೆ.ಎಂ. ಸುರೇಶ್ ಅವರ ಗೆಲುವು ನಿಶ್ಚಿತವಾಗಿದೆ. ಕ್ಷೇತ್ರದ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಒಟ್ಟಾಗಿ ಶ್ರಮಿಸಿ, ಸುರೇಶ್ ಅವರನ್ನು ದಾಖಲೆ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದರು.
ಸಭೆಯಲ್ಲಿ ಬಿಜೆಪಿ ಅಧ್ಯಕ್ಷ ಪ್ರಕಾಶ್, ಜೆಡಿಎಸ್ ಅಧ್ಯಕ್ಷ ದೊಡ್ಡೇಗೌಡ, ಮುಖಂಡರಾದ ವಿಶ್ವದೀಪ್ ನಾಗೇಶ್, ಪ್ರಸನ್ನಕುಮಾರ್, ಕೊಂಡಜ್ಜಿ ವಿಶ್ವನಾಥ್, ಶಂಕರೇಗೌಡ, ಕಡೇಹಳ್ಳಿ ಸಿದ್ದೇಗೌಡ, ವಿಜಯಕುಮಾರ್, ಭೈರೇಗೌಡ, ರುದ್ರೇಶ್, ಲೀಲಾವತಿ ಗಿಡ್ಡಯ್ಯ, ತ್ಯಾಗರಾಜ್, ಧನಪಾಲ್, ಮಹೇಶ್, ಯೋಗಾನಂದ್, ಹರಿಕಾರನಹಳ್ಳಿ ಪ್ರಕಾಶ್, ಜಯಣ್ಣ, ತೀರ್ಥಕುಮಾರ್, ಗೌರೀಶ್, ರಕ್ಷಿತ್ ನಂಜುಂಡಯ್ಯ ಸೇರಿದಂತೆ ಬಿಜೆಪಿ, ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು.
ವರದಿ : ಗಿರೀಶ್ ಕೆ ಭಟ್


