ನವದೆಹಲಿ: ಕೇಂದ್ರ ಸರ್ಕಾರವು ಜಾರಿಯಲ್ಲಿರುವ ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮಕ್ಕೆ (NSAP) ಹೊಸ ರೂಪ ನೀಡಿದ್ದು, ಅದರ ವ್ಯಾಪ್ತಿಗೆ ಬರುವ ಮೂರು ಪ್ರಮುಖ ಪಿಂಚಣಿ (Pension) ಯೋಜನೆಗಳಿಂದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹೆಸರನ್ನು ಕೈಬಿಟ್ಟಿದೆ.
ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಮುಂದಿನ ಐದು ವರ್ಷಗಳ ಅವಧಿಗೆ (2026-27ರಿಂದ 2030-31) ಒಟ್ಟು 53,428 ಕೋಟಿ ರೂಪಾಯಿಗಳ ವೆಚ್ಚದೊಂದಿಗೆ ಈ ಕಾರ್ಯಕ್ರಮವನ್ನು ಮುಂದುವರಿಸಲು ಸಂಪುಟ ಅನುಮೋದನೆ ನೀಡಿದೆ.
ಯೋಜನೆಗಳ ಮರುನಾಮಕರಣದ ವಿವರ
1995ರಲ್ಲಿ ಆರಂಭವಾದ ಈ ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮದ ಹೆಸರನ್ನು ಇನ್ನು ಮುಂದೆ 'ಪ್ರಧಾನಮಂತ್ರಿ ಸಾಮಾಜಿಕ ಸಹಾಯತಾ ಯೋಜನೆ' ಎಂದು ಬದಲಾಯಿಸಲಾಗಿದೆ.
ಇದರ ಅಡಿಯಲ್ಲಿ ಬರುತ್ತಿದ್ದ ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ ಯೋಜನೆಯನ್ನು 'ಪ್ರಧಾನಮಂತ್ರಿ ವೃದ್ಧಾವಸ್ಥಾ ಪಿಂಚಣಿ ಯೋಜನೆ' ಎಂದು, ಇಂದಿರಾ ಗಾಂಧಿ ರಾಷ್ಟ್ರೀಯ ವಿಧವಾ ಪಿಂಚಣಿ ಯೋಜನೆಯನ್ನು 'ಪ್ರಧಾನಮಂತ್ರಿ ವಿಧವಾ ಪಿಂಚಣಿ ಯೋಜನೆ' ಎಂದು ಹಾಗೂ ಇಂದಿರಾ ಗಾಂಧಿ ರಾಷ್ಟ್ರೀಯ ಅಂಗವಿಕಲ ಪಿಂಚಣಿ ಯೋಜನೆಯನ್ನು 'ಪ್ರಧಾನಮಂತ್ರಿ ದಿವ್ಯಾಂಗಜನ್ ಪಿಂಚಣಿ ಯೋಜನೆ' ಎಂದು ಮರುನಾಮಕರಣ ಮಾಡಲಾಗಿದೆ. ಇದರೊಂದಿಗೆ ರಾಷ್ಟ್ರೀಯ ಕುಟುಂಬ ಸೌಲಭ್ಯ ಯೋಜನೆಯನ್ನು 'ಪ್ರಧಾನಮಂತ್ರಿ ಪರಿವಾರ ಲಾಭ ಯೋಜನೆ' ಎಂದು ಬದಲಿಸಲಾಗಿದೆ.


