ಪಾಟ್ನಾ: ಕೇಂದ್ರ ಸರ್ಕಾರವು ಮುಂಬರುವ ರಾಷ್ಟ್ರೀಯ ಜನಗಣತಿ ಪ್ರಕ್ರಿಯೆಯಲ್ಲಿ ಜಾತಿ ಗಣತಿ ಸೇರಿಸುವ ಮಹತ್ವದ ನಿರ್ಧಾರವನ್ನು ಇತ್ತೀಚೆಗಷ್ಟೇ ಪ್ರಕಟಿಸಿದ್ದು, ಈ ಬಗ್ಗೆ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಭಯದಿಂದಲೇ ಪ್ರಧಾನಿ ನರೇಂದ್ರ ಮೋದಿ ಜನಗಣತಿಯೊಂದಿಗೆ ಜಾತಿಗಣತಿ ನಡೆಸಲು ಒಪ್ಪಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಬಿಹಾರದ ದರ್ಭಾಂಗಾ ಜಿಲ್ಲೆಯಲ್ಲಿ ನಡೆದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಾದ್ಯಂತ ಜಾತಿ ಜನಗಣತಿ ನಡೆಸಬೇಕು ಎಂದು ನಾವು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಹೇಳಿದ್ದೆವು.
ಅವರು ಹಾಗೆಯೇ ಮಾಡಿದ್ದಾರೆ. ಒಂದು ವೇಳೆ ಹಾಗೆ ಮಾಡದಿದ್ದರೆ ದೇಶದ ಯುವ ಜನತೆಯಿಂದ ಆಕ್ರೋಶ ವ್ಯಕ್ತವಾಗಬಹುದು ಎನ್ನುವ ಭಯದಿಂದಲೇ ಅವರು ಬೇಡಿಕೆಗಳನ್ನು ಈಡೇರಿಸಲು ಒಪ್ಪಿಕೊಂಡಿದ್ದಾರೆ ಎಂದರು.
ಬಿಜೆಪಿ ಸರ್ಕಾರವು ಕೇವಲ ಅಂಬಾನಿ, ಅದಾನಿ ಸೇರಿದಂತೆ ಕಾರ್ಪೊರೇಟ್ ಸಮುದಾಯದ ಹಿತಾಸಕ್ತಿಗಳನ್ನು ಪೂರೈಸುತ್ತದೆ ಎಂಬುದು ಸತ್ಯ. ಬದಲಾಗಿ ದಲಿತರು, ಒಬಿಸಿಗಳು ಮತ್ತು ಬುಡಕಟ್ಟು ಜನಾಂಗದವರು ಅಥವಾ ಮಧ್ಯಮ ವರ್ಗದವರಿಗೆ ಅನುಕೂಲ ಮಾಡುತ್ತದೆ ಎನ್ನುವುದು ಸುಳ್ಳು.
ಈಗಿರುವ ಎನ್‌ಡಿಎ ಸರ್ಕಾರದಿಂದ ಹೆಚ್ಚಿನದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಆದರೆ ಮುಂದಿನ ಚುನಾವಣೆಯಲ್ಲಿ ಕೇಂದ್ರದಲ್ಲಾಗಲಿ ಅಥವಾ ಬಿಹಾರದಲ್ಲಾಗಲಿ ನಾವು ಅಧಿಕಾರಕ್ಕೆ ಬಂದರೇ, ನಿಮ್ಮ ಹಿತಾಸಕ್ತಿಗಳನ್ನು ತಪ್ಪದೇ ಈಡೇರಿಸುತ್ತೇವೆ ಎಂದು ವಿದ್ಯಾರ್ಥಿಗಳಿಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಭರವಸೆ ನೀಡಿದರು.