ದಾವಣಗೆರೆ : ಅಭಿಮಾನಿಗಳು ತಮ್ಮ ನಾಯಕ ಸಿಎಂ ಆಗಲಿ ಎನ್ನುವುದು ಸಾಮಾನ್ಯವಾಗಿದ್ದು, ಎಲ್ಲರ ಬಗ್ಗೆಯೂ ಇದು ನಡೆಯುತ್ತಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ಮುಂದಿನ ಸಿಎಂ ಸತೀಶ್ ಜಾರಕಿಹೊಳಿ, ಮತ್ತೆ ದಲಿತ ಸಮಾವೇಶ ಆಯೋಜನೆ ಚರ್ಚೆ ಬಗ್ಗೆ ರಾಜನಹಳ್ಳಿಯ ವಾಲ್ಮೀಕಿ ಪೀಠದಲ್ಲಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಅಗತ್ಯಬಿದ್ದರೆ ದಲಿತ ಸಮಾವೇಶ ಮಾಡುತ್ತೇವೆ.
ಸಚಿವ ಜಿ.ಪರಮೇಶ್ವರ್ ಅವರೇ ಲೀಡ್ ಮಾಡುತ್ತಾರೆ. ಅವರೇ ಹೆಡ್. ದಲಿತ ಸಮಾವೇಶದ ಕುರಿತಾಗಿ ಹೆಚ್ಚಾಗಿ ಪರಮೇಶ್ವರ್ ಬಳಿ ಕೇಳಿ. ಅದರ ರೂಪುರೇಷೆ ಕುರಿತು ಅವರ ಬಳಿ ಕೇಳಿದರೆ ತಿಳಿಸುತ್ತಾರೆ. ಸಮಾವೇಶವು ಅವರ ನೇತೃತ್ವದಲ್ಲೇ ಆಗಬೇಕು ಎಂದರು.
ಸದ್ಯಕ್ಕೆ ಸಿಎಂ ಬದಲಾವಣೆ ವಿಚಾರ ಇಲ್ಲ. ಸಿದ್ದರಾಮಯ್ಯ ಅವರು ಪೂರ್ಣಾವಧಿಗೆ ಸಿಎಂ ಆಗಿ ಮುಂದುವರಿಯಲಿದ್ದಾರೆ ಎಂದ ಅವರು, ದಲಿತ ನಾಯಕರು ಸಭೆ ಸೇರುವುದು, ಸಮಾವೇಶ ಮಾಡಬಾರದಾ ಎಂದು ಪ್ರಶ್ನಿಸಿದರು.
ಇನ್ನು ಇದೇ ವೇಳೆ ದೆಹಲಿ ಚುನಾವಣಾ ಫಲಿತಾಂಶದ ಕುರಿತು ಪ್ರತಿಕ್ರಿಯೆ ನೀಡಿ, ಇವಿಎಂ ಬಗ್ಗೆ ಸಾಕಷ್ಟು ಅನುಮಾನಗಳು ಇವೆ. ಅದರ ಕುರಿತು ಚರ್ಚೆ ಆಗಬೇಕು.
ಇದಲ್ಲದೇ ಸಿದ್ದರಾಮಯ್ಯ ಅವರು ಸಿಎಂ ಆಗಿ ಮಂಡಿಸಲಿರುವ ಕೊನೆಯ ಬಜೆಟ್ ಎಂಬ ಬಿಜೆಪಿ ಅವರ ಮಾತಿಗೂ ಕೌಂಟರ್ ನೀಡಿರುವ ಸತೀಶ್ ಅವರು, ಅದನ್ನು ಬಿಜೆಪಿಯವರ ಬಳಿಯೇ ಕೇಳಿ. ಸಿಎಂ ಆಗಿ ಸಿದ್ದರಾಮಯ್ಯ ಅವರೇ ಮುಂದುವರಿಯುವುದು ಖಚಿತ ಎಂಬುವುದು ನಮಗೆ ಗೊತ್ತಿದೆ ಎಂದು ತಿಳಿಸಿದರು.