ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ ಮಾಡಿರುವ ಆರೋಪದ ಮೇಲೆ ಇಬ್ಬರು ಮಹಿಳಾ ಪತ್ರಕರ್ತರು ಸೇರಿದಂತೆ ಮೂವರನ್ನು ಹೈದರಾಬಾದ್‌ನ ಸೈಬರ್ ಪೊಲೀಸರು ಬುಧವಾರ (ಮಾ. 12) ಬಂಧಿಸಿದ್ದಾರೆ.
ಪಲ್ಸ್ ನ್ಯೂಸ್‌ನ ವ್ಯವಸ್ಥಾಪಕ ನಿರ್ದೇಶಕಿ ಪೊಗಡದಂಡ ರೇವತಿ, ವರದಿಗಾರ್ತಿ ತನ್ವಿ ಯಾದವ್ ಮತ್ತು ʼನಿಪ್ಪುಕೋಡಿʼ ಎಂಬ ಎಕ್ಸ್ ಬಳಕೆದಾರರು ಬಂಧಿತರು. ಕಾಂಗ್ರೆಸ್ ಸರ್ಕಾರದ ಈ ನಡೆಗೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಕಾಂಗ್ರೆಸ್ ನೀಡಿದ ದೂರಿನ ನಂತರ ಮೂವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಅಶ್ಲೀಲ ವಿಷಯಗಳನ್ನು ಪ್ರಕಟಿಸುವುದರಿಂದ ಹಿಡಿದು ಸಂಘಟಿತ ಅಪರಾಧ ಮತ್ತು ಕ್ರಿಮಿನಲ್ ಪಿತೂರಿ, ದ್ವೇಷವನ್ನು ಪ್ರಚೋದಿಸಲು ವದಂತಿಗಳನ್ನು ಹರಡುವುದು ಹಾಗೂ ಶಾಂತಿ ಉಲ್ಲಂಘನೆಗೆ ಪ್ರಯತ್ನ ಸೇರಿದಂತೆ ಇವರ ವಿರುದ್ಧ ಗಂಭೀರ ಆರೋಪ ಹೊರಿಸಲಾಗಿದೆ.