ನವದೆಹಲಿ: ಭಾರತ ಹಾಗೂ ಪಾಕಿಸ್ತಾನದ ನಡುವಿನ ಉದ್ವಿಗ್ನಗೊಂಡ ಸಮಯದಲ್ಲಿ ಇಡೀ ದೇಶ ಭಾರತೀಯ ಸೇನೆಯೊಂದಿಗೆ ನಿಂತಿದೆ. ಹೀಗಾಗಿ ಪ್ರತಿಯೊಬ್ಬ ಭಾರತೀಯನಿಗೂ ವಂದನೆಗಳು ಎಂದು ಭಾರತೀಯ ಸೇನೆ ತಿಳಿಸಿದೆ.
ಮೂರು ಸೇನೆಗಳ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್, ಕಳೆದ ಕೆಲವು ವರ್ಷಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳ ಸ್ವರೂಪ ಬದಲಾಗಿದೆ.
ಆಪರೇಷನ್ ಸಿಂಧೂರ್‌ನ ವಾಯು ರಕ್ಷಣಾ ಕ್ರಮವನ್ನು ನಾವು ಅರ್ಥಮಾಡಿಕೊಳ್ಳಬೇಕು. ಈಗ ನಮ್ಮ ಸೈನಿಕರ ಜೊತೆಗೆ, ಅಮಾಯಕ ನಾಗರಿಕರ ಮೇಲೂ ದಾಳಿ ನಡೆಯುತ್ತಿದೆ. ಪಹಲ್ಗಾಮ್ ಹೊತ್ತಿಗೆ ಈ ಪಾಪದ ಕೊಡ ತುಂಬಿತ್ತು ಎಂದರು.
ಎಲ್‌ಒಸಿ ಮತ್ತು ಅಂತಾರಾಷ್ಟ್ರೀಯ ಗಡಿಯನ್ನು ದಾಟದೆಯೇ ಭಯೋತ್ಪಾದಕರ ಮೇಲೆ ನಮ್ಮ ನಿಖರವಾದ ದಾಳಿಗಳನ್ನು ನಡೆಸಲಾಯಿತು. ಪಾಕಿಸ್ತಾನವು ತನ್ನ ಗಡಿಯೊಳಗೆ ಇದ್ದುಕೊಂಡು ಇದೇ ರೀತಿ ದಾಳಿ ಮಾಡುತ್ತದೆ ಎಂದು ನಮಗೆ ಸಂಪೂರ್ಣವಾಗಿ ತಿಳಿದಿತ್ತು. ಅದಕ್ಕಾಗಿಯೇ ನಾವು ನಮ್ಮ ವಾಯು ರಕ್ಷಣೆಗೆ ಸಂಪೂರ್ಣ ಸಿದ್ಧತೆಗಳನ್ನು ಮಾಡಿಕೊಂಡಿದ್ದೆವು ಎಂದು ವಿವರಿಸಿದರು.
ಭಯೋತ್ಪಾದನೆ ವಿರುದ್ಧ ನಮ್ಮ ಹೋರಾಟ ಮುಂದುವರಿಯುತ್ತದೆ. ಭವಿಷ್ಯದ ಕ್ರಮಕ್ಕೆ ನಾವು ಸಿದ್ಧರಿದ್ದೇವೆ. ನಮ್ಮ ಎಲ್ಲಾ ಸೇನಾ ನೆಲೆಗಳು, ನಮ್ಮ ಎಲ್ಲಾ ಸೇನಾ ವ್ಯವಸ್ಥೆಗಳು ಸಂಪೂರ್ಣವಾಗಿ ಸಕ್ರಿಯವಾಗಿವೆ ಮತ್ತು ಅಗತ್ಯವಿದ್ದರೆ ಯಾವುದೇ ಭವಿಷ್ಯದ ಕಾರ್ಯಾಚರಣೆಯನ್ನು ನಿರ್ವಹಿಸಲು ಸಂಪೂರ್ಣವಾಗಿ ಸಿದ್ಧವಾಗಿವೆ ಎಂದು ಸೇನೆ ಪಾಕಿಸ್ತಾನಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದೆ.