ಬೆಂಗಳೂರು : ಮಾಜಿ ಸಿಎಂ ಕುಮಾರಸ್ವಾಮಿ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ವಾರಾಂತ್ಯ ಬಿಟ್ಟು ಉಳಿದ ದಿನ ಹಿಂದಿ ಕಲಿಯಲು ಶುರು ಮಾಡಿದ್ದಾರೆ. ಪ್ರತಿದಿನ 90 ನಿಮಿಷಗಳ ಕಾಲ ಹಿಂದಿ ಕಲಿಕೆಯಲ್ಲಿ ತೊಡಗಿಕೊಳ್ಳಲಿದ್ದಾರೆ. ಸಚಿವರು ಇನ್ನು ಮುಂದೆ ಆನ್‌ಲೈನ್ ಮೂಲಕ ಹಿಂದಿಯನ್ನು ಕಲಿಯಲಿದ್ದಾರೆ.
ಹಿಂದಿ ಕಲಿಕೆಗಾಗಿಯೇ ಬೋಧಕರನ್ನು ನೇಮಿಸಿಕೊಂಡಿದ್ದು, ಹಿಂದಿ ಬರವಣಿಗೆ ಹಾಗೂ ಸುಲಭವಾಗಿ ಹಿಂದಿಯಲ್ಲಿ ಮಾತನಾಡುವುದನ್ನು ಅವರು ಹೇಳಿಕೊಡಲಿದ್ದಾರೆ. ಲೋಕ ಸಭೆಯಲ್ಲಿ ಹಿಂದಿಯಲ್ಲಿ ಮಾತನಾಡಲು ಹಾಗೂ ತಮ್ಮ ವಿಚಾರಗಳನ್ನು ಮಂಡಿಸಲು ಕಷ್ಟವಾಗುತ್ತಿರುವುದರಿಂದ ಕುಮಾರಸ್ವಾಮಿಯವರು ಈ ನಿರ್ಧಾರವನ್ನು ಕೈಗೊಂಡಿದ್ದಾರೆ.
ಹೆಚ್ಚಿನ ಸಂಸದರು ಹಿಂದಿಯಲ್ಲಿ ಮಾತನಾಡುತ್ತಾರೆ. ನನ್ನ ಸಚಿವಾಲಯದ ಎಲ್ಲ ಅಧಿಕಾರಿಗಳು ಹಿಂದಿಯಲ್ಲಿ ಮಾತನಾಡುತ್ತಾರೆ. ಹೀಗಾಗಿ ಹಿಂದಿ ಕಲಿಕೆ ನನಗೆ ಅನಿವಾರ್ಯವಾಗಿದೆ, ಬೇರೆ ದಾರಿಯಿಲ್ಲ ಎಂದು ಹೇಳಿದ್ದಾರೆ.
1996 ರಲ್ಲಿ ಪ್ರಧಾನಿಯಾಗಿದ್ದ ಎಚ್‌ಡಿ ದೇವೇಗೌಡ ಅವರಿಗೂ ಹಿಂದಿ ಭಾಷೆಯ ಸಮಸ್ಯೆ ಕಾಡಿತ್ತು. 30 ದಿನಗಳಲ್ಲಿ ಹಿಂದಿ ಕಲಿಯಿರಿ ಎಂಬ ಪುಸ್ತಕ ಹಿಡಿದು ಓಡಾಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಪತ್ರಕರ್ತರೊಬ್ಬರು ಫೋಟೋ ತೆಗೆದಿದ್ದರು. ಆಗಿನ ಕಾಲದಲ್ಲಿಯೇ ಆ ಫೋಟೋ ಎಲ್ಲೆಡೆ ವೈರಲ್ ಆಗಿತ್ತು.