ಬಾಗಲಕೋಟೆ : ಮನೆಯ ಮುಂದೆ ಮಲಗಿದ್ದ ಹಸುವಿನ ಕೆಚ್ಚಲಿನ ಒಂದು ಮೊಲೆಯನ್ನು ಕೊಯ್ದ ಘಟನೆ ಜಿಲ್ಲೆಯ ಕುಳಗೇರಿ ಕ್ರಾಸ್ನಲ್ಲಿ ನಡೆದಿದೆ.
ತಡರಾತ್ರಿ ಈ ಅಮಾನವೀಯ ಘಟನೆ ನಡೆದಿದ್ದು ಬೆಳಗಿನ ಜಾವ ಹಸುವಿನ ಮಾಲೀಕ ಕೊಟ್ಟಿಗೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.
ಗರ್ಭಾವಸ್ಥೆಯಲ್ಲಿರುವ ಹಸುವಿನ ಕೆಚ್ಚಲಿನ ಒಂದು ಮೊಲೆ ಕೊಯ್ದು ಪಾಪಿಗಳು ವಿಕೃತಿ ಮೆರೆದಿದ್ದಾರೆ. ಸದ್ಯ ಹಸು ರಕ್ತ ಸ್ರಾವದಿಂದ ನರಳಾಡಿದ್ದು ಸ್ಥಳೀಯ ಪಶು ಆಸ್ಪತ್ರೆಗೆ ತಂದು ಚಿಕಿತ್ಸೆ ಕೊಡಿಸಲಾಗಿದೆ.
ಹಸು ಒಬ್ಬಿಬ್ಬರಿಗೆ ಮಣಿಯುವುದಿಲ್ಲ. ನಾಲ್ಕೈದು ಜನ ಮೂಗುದಾರ ಹಿಡಿದು ಈ ಕೃತ್ಯ ನಡೆಸಿರಬಹುದು ಎಂದು ಹಸುವಿನ ಮಾಲೀಕ ಬರಮಪ್ಪ ಹೇಳಿದ್ದಾರೆ.
ಸದ್ಯ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದು ಘಟನಾ ಸ್ಥಳಕ್ಕೆ ಬಂದು ಮಾಹಿತಿ ಪಡೆದುಕೊಂಡು ಹೋಗಿದ್ದಾರಂತೆ.
ಪಾಪಿಗಳ ಈ ಕೃತ್ಯಕ್ಕೆ ಜನರು ಹಿಡಿಶಾಪ ಹಾಕಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಾವು ಪೂಜಿಸುವ ಗೋಮಾತೆ ದೇವರ ಸಮಾನ. ಆದರೆ ಹಾಲು ಕೊಡುವ ಗೋವಿನ ಕೆಚ್ಚಲು ಕೊಯ್ದು ಪಾಪದ ಕೆಲಸ ಮಾಡಿದ್ದಾರೆ. ಈ ದುಷ್ಕೃತ್ಯ ಎಸಗಿದ ಪಾಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂದಿದ್ದಾರೆ.
ಕೆಲ ತಿಂಗಳ ಹಿಂದೆಯಷ್ಟೇ ಸಚಿವ ಜಮೀರ್ ಅಹಮದ್ ಅವರ ಕ್ಷೇತ್ರದಲ್ಲಿ ಇಂತಹದ್ದೆ ಘಟನೆ ನಡೆದಾಗ, ಭಾರೀ ರಾಜಕೀಯ ಸಂಘರ್ಷಕ್ಕೂ ಕಾರಣವಾಗಿತ್ತು. ಅಲ್ಲದೇ ಬಿಜೆಪಿಯು ಬೃಹತ್ ಪ್ರತಿಭಟನೆಯನ್ನು ಮಾಡಿತ್ತು. ಇದೀಗ ಇಂತಹ ಅಮಾನವೀಯ ಘಟನೆ ಮರುಕಳಿಸಿದೆ.