ನೇಪಾಳದಲ್ಲಿ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಉಂಟಾದ ಪ್ರವಾಹ ಮತ್ತು ಭೂಕುಸಿತದ ಅನಾಹುತಕ್ಕೆ ಕನಿಷ್ಠ 21 ಜನರು ಬಲಿಯಾಗಿದ್ದಾರೆ ಹಾಗೂ 5 ಜನರು ನಾಪತ್ತೆಯಾಗಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ಅಪಾಯ ಕಡತಗೊಳಿಸುವಿಕೆ ಮತ್ತು ನಿರ್ವಹಣಾ ಪ್ರಾಧಿಕಾರ (NDRRMA) ತಿಳಿಸಿದೆ.ವಿಪತ್ತಿನಲ್ಲಿ 5 ಜನರು ಗಾಯಗೊಂಡಿದ್ದು, ದೇಶಾದ್ಯಂತ 247 ಕುಟುಂಬಗಳು ತೀವ್ರವಾಗಿ ಸಂಕಷ್ಟಕ್ಕೆ ಸಿಲುಕಿವೆ.
ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ ಸೆಪ್ಟೆಂಬರ್ 24 ರಿಂದ 27 ರವರೆಗೆ ವಿವಿಧ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ. ಭೂಕುಸಿತದ ಘಟನೆಗಳೇ ಹೆಚ್ಚಿನ ಸಾವುಗಳಿಗೆ ಕಾರಣವಾಗಿದ್ದು, 14 ಜನರು ಮೃತಪಟ್ಟಿದ್ದಾರೆ.
ಪ್ರವಾಹದಿಂದ 4 ಹಾಗೂ ನಿರಂತರ ಮಳೆಯಿಂದಾಗಿ 3 ಸಾವುಗಳು ಸಂಭವಿಸಿವೆ. ಸುಮಾರು 260 ಮನೆಗಳು ಸಂಪೂರ್ಣವಾಗಿ ಧ್ವಂಸಗೊಂಡಿದ್ದರೆ, 80 ಮನೆಗಳು ಭಾಗಶಃ ಹಾನಿಗೊಳಗಾಗಿವೆ.
ಅಪಾಯಕಾರಿ ಪ್ರದೇಶಗಳಲ್ಲಿದ್ದ ಸುಮಾರು 3,000 ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದ್ದು, ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.


