ಬೆಂಗಳೂರು: ಪ್ರಧಾನಿ ಮೋದಿ ಇಂಧನ ಉಳಿತಾಯ ಮಾಡಿ ಎಂಬ ಕರೆಗೆ ಸ್ಪಂದಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತಿತರ ನಾಯಕರು ಇಂದು ನಮ್ಮ ಮೆಟ್ರೋದಲ್ಲಿ ಪ್ರಯಾಣ ಮಾಡಿದ್ದಾರೆ.
ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ಧದ ಸನ್ನಿವೇಶದಿಂದ ನಮ್ಮ ದೇಶವೂ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಬಾರದು ಎಂದರೆ ಇಂಧನ ಉಳಿತಾಯ, ಚಿನ್ನ ಖರೀದಿ ಮಾಡದೇ ಇರುವುದು, ವರ್ಕ್ ಫ್ರಂ ಹೋಂ ಮಾಡಿ ಎಂದು ಪ್ರಧಾನಿ ಮೋದಿ ಕರೆ ನೀಡಿದ್ದರು.
ಅದರಂತೆ ಸ್ವತಃ ತಮ್ಮ ಬೆಂಗಾವಲು ವಾಹನಗಳನ್ನೂ ಕಡಿತಗೊಳಿಸಿದ್ದಾರೆ. ಮೋದಿ ಕರೆಗೆ ಓಗೊಟ್ಟು ಈಗಾಗಲೇ ಕೆಲವು ಬಿಜೆಪಿ ನಾಯಕರು ಬೆಂಗಾವಲು ಪಡೆ ಕಡಿತಗೊಳಿಸಿದ್ದರೆ ಮತ್ತೆ ಕೆಲವರು ಬೈಕ್, ಸೈಕಲ್ ಸವಾರಿ ಮಾಡಿದ್ದರು.
ಇದೀಗ ಬಿವೈ ವಿಜಯೇಂದ್ರ ನಮ್ಮ ಮೆಟ್ರೋದಲ್ಲಿ ಪ್ರಯಾಣ ಮಾಡಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಜೀ ಅವರ ಕರೆಗೆ ಸ್ಪಂದಿಸಿದ ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಇಂದು ಮೆಜೆಸ್ಟಿಕ್ ನಿಂದ ಕೆಂಗೇರಿ ವರೆಗೂ ಮೆಟ್ರೋದಲ್ಲಿ ಪ್ರಯಾಣ ಮಾಡಿದರು.
ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್.ಹರೀಶ್ ಉಪಸ್ಥಿತರಿದ್ದರು. ಈ ವೇಳೆ ನಮ್ಮ ಮೆಟ್ರೋದಲ್ಲಿ ಪೇಪರ್ ಓದುತ್ತಾ, ಸಹ ಪ್ರಯಾಣಿಕರೊಂದಿಗೆ ಸಂವಾದ ನಡೆಸುತ್ತಾ ತಾವು ಹೋಗಬೇಕಾದ ಗಮ್ಯವನ್ನು ತಲುಪಿದ್ದಾರೆ.

