ಮುಂಬೈ: ಕಚ್ಚಾ ತೈಲ ದರ ಏರಿಕೆ ಮತ್ತು ಪಶ್ಚಿಮ ಏಷ್ಯಾ ಸಂಘರ್ಷದ ಪರಿಣಾಮವಾಗಿ ಡಾಲರ್ ಎದುರು ರೂಪಾಯಿ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದೆ.
ಅಂತರಬ್ಯಾಂಕ್ ವಿದೇಶಿ ವಿನಿಮಯದ ವೇಳೆ ಬುಧವಾರ, ಡಾಲರ್ ವಿರುದ್ಧ ರೂಪಾಯಿ ಮೌಲ್ಯವು 95.80ಕ್ಕೆ ಕುಸಿದು, ನಂತರ ಅಲ್ಪ ಚೇತರಿಕೆ ಕಂಡು 95.67ಕ್ಕೆ ಸ್ಥಿರಗೊಂಡಿದೆ.
ಚಿನ್ನ ಹಾಗೂ ಬೆಳ್ಳಿ ಆಮದು ಸುಂಕವನ್ನು ಹೆಚ್ಚಿಸಿರುವುದು ಡಾಲರ್ ಎದುರು ರೂಪಾಯಿ ಮೇಲಿನ ಒತ್ತಡವನ್ನು ತಗ್ಗಿಸಿದ್ದರೂ, ಕಚ್ಚಾ ತೈಲ ಬೆಲೆ ಏರಿಕೆ ಮತ್ತು ಪಶ್ಚಿಮ ಏಷ್ಯಾದಲ್ಲಿನ ಸದ್ಯದ ಸ್ಥಿತಿಯು ರೂಪಾಯಿ ಮೇಲಿನ ಒತ್ತಡ ಹೆಚ್ಚಾಗಿದೆ ಎಂದು ಫೊರೆಕ್ಸ್ ವಹಿವಾಟುದಾರರು ತಿಳಿಸಿದ್ದಾರೆ.
ಡಾಲರ್ ಎದುರು ರೂಪಾಯಿಯು ಏಷ್ಯಾ ರಾಷ್ಟ್ರಗಳ ಕರೆನ್ಸಿಗಳಲ್ಲೇ ಅತ್ಯಂತ ಕಳಪೆ ಸಾಧನೆ ತೋರಿದ್ದು, ಈ ವರ್ಷ ಈವರೆಗೆ ಶೇ 6ರಷ್ಟು ಕುಸಿತ ಅನುಭವಿಸಿದೆ.
ದಿನದ ವಹಿವಾಟಿನ ವೇಳೆ ಡಾಲರ್ ಎದುರು ರೂಪಾಯಿ ಮೌಲ್ಯವು 95.80ವರೆಗೂ ಕುಸಿದಿತ್ತು. ನಂತರ, ಕನಿಷ್ಠ 95.51 ಚೇತರಿಕೆ ಕಂಡಿತ್ತು. ವಹಿವಾಟಿನ ಅಂತ್ಯಕ್ಕೆ ₹ 95.67ರಲ್ಲಿ ಸ್ಥಿರಗೊಂಡಿದೆ.

