ಬೆಂಗಳೂರು: ರಾಜ್ಯ ವಿಧಾನಸಭೆಯ ಮುಂಗಾರು ಅಧಿವೇಶನಕ್ಕೆ ದಿನಾಂಕ ನಿಗದಿಯಾಗಿದ್ದು, ಆಗಸ್ಟ್ 6ರಿಂದ ಕಲಾಪಗಳು ಆರಂಭಗೊಳ್ಳಲಿವೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದ್ದಾರೆ. ಸೋಮವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಈ ಪ್ರಮುಖ ಮಾಹಿತಿ ಹಂಚಿಕೊಂಡರು.
ದೆಹಲಿ ಭೇಟಿ ಹಾಗೂ ಸಚಿವ ಸಂಪುಟ ಸಭೆಯ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ ಸಿಎಂ, "ಆಗಸ್ಟ್ 6ರಿಂದ ಅಧಿವೇಶನ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ. ಸದ್ಯದಲ್ಲೇ ಕೇವಲ ಒಂದು ದಿನದ ಅಧಿಕೃತ ಕೆಲಸದ ನಿಮಿತ್ತ ದೆಹಲಿಗೆ ಭೇಟಿ ನೀಡಲಿದ್ದೇನೆ.
ತದನಂತರ ನಮ್ಮ ಪಕ್ಷದ ವರಿಷ್ಠರು ಮುಂದಿನ 3-4 ದಿನಗಳಲ್ಲಿ ದಿನಾಂಕ ನಿಗದಿಪಡಿಸಲಿದ್ದು, ಆ ಬಳಿಕ ಮತ್ತೊಮ್ಮೆ ದೆಹಲಿಗೆ ಪ್ರವಾಸ ಕೈಗೊಳ್ಳಲಿದ್ದೇನೆ," ಎಂದರು.


