ಬೆಂಗಳೂರು: ಇಡೀ ದೇಶ ನಾಳೆ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಕ್ಕೆ ಸಿದ್ಧವಾಗುತ್ತಿದೆ. ಆದರೆ ಸಿಲಿಕಾನ್ ಸಿಟಿಯಲ್ಲಿ ವಿಧ್ವಂಸಕ ಕೃತ್ಯ ಎಸಗಲು ಹೊಂಚು ಹಾಕಿದ್ದ ಶಂಕಿತ ವ್ಯಕ್ತಿಯನ್ನ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಸೆರೆಹಿಡಿದಿದ್ದಾರೆ.
ಈ ಬಂಧನದ ಮೂಲಕ ನಗರದಲ್ಲಿ ಸಂಭವಿಸಬಹುದಾಗಿದ್ದ ದೊಡ್ಡ ಮಟ್ಟದ ವಿಪತ್ತು ತಪ್ಪಿದಂತಾಗಿದೆ.
ಬಂಧಿತ ಶಂಕಿತನನ್ನು ಪಶ್ಚಿಮ ಬಂಗಾಳ ಮೂಲದ ಅಸಾಪೂಲ್ ಮಲ್ಲಿಕ್ (25) ಎಂದು ಗುರುತಿಸಲಾಗಿದೆ. ಈತ ಬೆಂಗಳೂರಿನ ಹೊರವಲಯದ ಜಿಗಣಿಯಲ್ಲಿ ವಾಸವಿದ್ದು, ಖಾಸಗಿ ಕಂಪನಿಯೊಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಯಾರಿಗೂ ಅನುಮಾನ ಬರದಂತೆ ಸಾಮಾನ್ಯ ವ್ಯಕ್ತಿಯಂತೆ ಕೆಲಸ ಮಾಡುತ್ತಿದ್ದ ಈತ, ಒಳಗೊಳಗೆ ಉಗ್ರ ಸಂಘಟನೆಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದ ಎಂಬುದು ಈಗ ಬಯಲಾಗಿದೆ.
ಅಸಾಪೂಲ್ ಮಲ್ಲಿಕ್ ಪಾಕಿಸ್ತಾನ ಮೂಲದ ಉಗ್ರ ಸಂಘಟನೆ TTP (Tehreek-e-Taliban Pakistan) ಜೊತೆ ನಂಟು ಹೊಂದಿದ್ದ. ಸೋಷಿಯಲ್ ಮೀಡಿಯಾ ಮೂಲಕ ಅಫ್ಘಾನಿಸ್ತಾನದ TTP ಸದಸ್ಯ ಇಮ್ರಾನ್ ಅಹಿಂದರ್ ಎಂಬಾತನ ಪರಿಚಯ ಮಾಡಿಕೊಂಡಿದ್ದ ಅಸಾಪೂಲ್, ಉಗ್ರ ಸಂಘಟನೆಯ ವಿಚಾರಧಾರೆಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದ. ಇಸ್ರೇಲ್-ಪ್ಯಾಲೆಸ್ಟೈನ್ ವಿವಾದದಲ್ಲಿ ಇಸ್ರೇಲ್ ಪರವಾಗಿ ಪಾಕಿಸ್ತಾನ ಸೇನೆ ಕೆಲಸ ಮಾಡುತ್ತಿದೆ ಎಂದು ಆಕ್ರೋಶಗೊಂಡಿದ್ದ ಈತ, ಪಾಕಿಸ್ತಾನ ಸೇನೆ ಹಾಗೂ ಭಾರತದ ಮೇಲೆ ಪ್ರತಿಕಾರ ತೀರಿಸಿಕೊಳ್ಳಲು ಸಂಚು ರೂಪಿಸಿದ್ದ ಎನ್ನಲಾಗಿದೆ.


