ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ 'ಹಿಟ್ಲರ್ ಕಲ್ಯಾಣ' ಮೂಲಕ ಮನೆಮಾತಾಗಿದ್ದ ಖ್ಯಾತ ನಟ ಹಾಗೂ ನಿರ್ಮಾಪಕ ದಿಲೀಪ್ ರಾಜ್ (47) ಅವರು ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಸದಾ ಸಕ್ರಿಯರಾಗಿರುತ್ತಿದ್ದ ನಟನ ಹಠಾತ್ ಸಾವು ಕನ್ನಡ ಚಿತ್ರರಂಗ ಹಾಗೂ ಕಿರುತೆರೆ ಲೋಕಕ್ಕೆ ದೊಡ್ಡ ಆಘಾತವನ್ನುಂಟು ಮಾಡಿದೆ.
ಬೆಂಗಳೂರಿನಲ್ಲಿ ಹೃದಯಾಘಾತ ಸಂಭವಿಸಿದ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ಲಿಂಗಾಯತ ಸಂಪ್ರದಾಯದಂತೆ ವಿದಾಯ: ದಿಲೀಪ್ ರಾಜ್ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನದ ನಂತರ ರಾಮನಗರ ತಾಲೂಕಿನ ಗುನ್ನೂರು ಗ್ರಾಮಕ್ಕೆ ಕೊಂಡೊಯ್ಯಲಾಯಿತು.
ಅಲ್ಲಿನ ಅವರ ಸ್ವಂತ ಫಾರ್ಮ್‌ಹೌಸ್ ಜಮೀನಿನಲ್ಲಿ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಸಕಲ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು.
ದಿಲೀಪ್ ರಾಜ್ ಅವರ ಸಹೋದರ ದೀಪಕ್ ರಾಜ್ ಎಲ್ಲ ವಿಧಿ ವಿಧಾನ ಪೂರೈಸಿದರು. ಕುಟುಂಬದ ಆಪ್ತರು ಮತ್ತು ಧಾರ್ಮಿಕ ಮುಖಂಡರ ಸಮ್ಮುಖದಲ್ಲಿ ಅಂತಿಮ ವಿಧಿಗಳನ್ನು ಪೂರೈಸಿ, ಮಣ್ಣು ಮಾಡಲಾಯಿತು.
10 ವರ್ಷಗಳ ಹಿಂದೆ ನಟ ದಿಲೀಪ್ ರಾಜ್ 1 ಎಕರೆ ಜಮೀನು ಖರೀದಿಸಿದ್ದರು. ಅಲ್ಲಿ ತೋಟ ನಿರ್ಮಾಣ ಮಾಡಿಕೊಂಡು ಮನೆ ಕಟ್ಟಿದ್ದರು. ತಿಂಗಳಿಗೊಮ್ಮೆ ಫಾರ್ಮ್‌ಹೌಸ್‌ಗೆ ಭೇಟಿ ನೀಡುತ್ತಿದ್ದರು.
ಇಂದು ಬೆಳಗಿನ ಜಾವ ದಿಲೀಪ್ ರಾಜ್‌ಗೆ ಹೃದಯಾಘಾತವಾಗಿದೆ. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಕೂಡ ಚಿಕಿತ್ಸೆಗೆ ಸ್ಪಂದಿಸದೇ ದಿಲೀಪ್ ರಾಜ್ ಕೊನೆಯುಸಿರೆಳೆದಿದ್ದಾರೆ.
ದಿಲೀಪ್ ರಾಜ್ ಅವರ ಮೃತದೇಹ ಕುಮಾರಸ್ವಾಮಿ ಲೇಔಟ್‌ನ ಅಪೋಲೊ ಆಸ್ಪತ್ರೆಯಲ್ಲಿರಿಸಲಾಗಿದೆ. ದಿಲೀಪ್ ನಿಧನಕ್ಕೆ ಕನ್ನಡ ಚಿತ್ರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.
ಹಿಟ್ಲರ್ ಕಲ್ಯಾಣ ಸೀರಿಯಲ್ ಮೂಲಕ ದಿಲೀಪ್ ರಾಜ್ ಕಿರುತೆರೆಗೆ ಕಂಬ್ಯಾಕ್ ಮಾಡಿದ್ದರು. ಆ ಪಾತ್ರಕ್ಕೆ ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಸಿನಿಮಾ ಮತ್ತು ಟಿವಿ ಎರಡರಲ್ಲೂ ನಟ, ನಿರ್ಮಾಪಕ ದಿಲೀಪ್ ರಾಜ್ ಗುರುತಿಸಿಕೊಂಡಿದ್ದರು.
2005ರಲ್ಲಿ ಬಿಡುಗಡೆಯಾದ ಬಾಯ್‌ಫ್ರೆಂಡ್ ಸಿನಿಮಾದಲ್ಲಿ ನಾಯಕನಾಗಿ ನಟಿಸುವ ಮೂಲಕ ಸಿನಿಮಾಗೆ ಎಂಟ್ರಿ ಕೊಟ್ಟಿದ್ದರು. ಮಿಲನ ಸಿನಿಮಾದಲ್ಲಿ ವಿಲನ್ ಪಾತ್ರದ ಮೂಲಕ ಹೆಸರುವಾಸಿಯಾಗಿದ್ದರು.
ಸುಗ್ರೀವ, ಗೆಳೆಯ, ಯೂಟರ್ನ್, ಸೇರಿದಂತೆ 28 ಚಿತ್ರಗಳಲ್ಲಿ ದಿಲೀಪ್ ರಾಜ್ ನಟಿಸಿದ್ದಾರೆ. ಸದ್ಯ ಜನಪ್ರಿಯ ಧಾರಾವಾಹಿ `ಕೃಷ್ಣ ರುಕ್ಕು' ಧಾರವಾಹಿ ಪ್ರೊಡ್ಯೂಸ್ ಮಾಡುತ್ತಿದ್ದರು. 47 ವರ್ಷದ ದಿಲೀಪ್ ರಾಜ್ ಕೊನೆಯದಾಗಿ 'ಲವ್ ಮಾಕ್ಟೇಲ್ 3' ಸಿನಿಮಾದಲ್ಲಿ ನಟಿಸಿದ್ದರು. ಅಲ್ಲದೇ ಮನೆಯೊಂದು ಮೂರು ಬಾಗಿಲು, ರಥಸಪ್ತಮಿ, ಪ್ರೀತಿಗಾಗಿ ಧಾರಾವಾಹಿಗಳಲ್ಲೂ ನಟಿಸಿದ್ದರು.

