ಕಾಳಗಿ : ತಾಲೂಕಿನ ರಟಕಲ್ ಗ್ರಾಮದಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಗ್ರಾಮಸ್ಥರು ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಗ್ರಾಮ ಪಂಚಾಯತ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲವು ದಿನಗಳಿಂದ ಸಮರ್ಪಕ ನೀರು ಸರಬರಾಜು ಆಗದೆ ಜನರು ಹಾಗೂ ಜಾನುವಾರುಗಳು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಗ್ರಾಮದ ಹಲವು ಕಡೆಗಳಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಒಡೆದು ನೀರು ರಸ್ತೆ ಮೇಲೆ ಸೋರಿಕೆಯಾಗುತ್ತಿದ್ದು, ಮಹಿಳೆಯರು ನೀರಿಗಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಶಿಷ್ಟ ಜಾತಿ ಬಡಾವಣೆಯಲ್ಲಿನ ನೀರಿನ ಮೋಟಾರ್ ಮತ್ತು ಕರೆಂಟ್ ಮೀಟರ್ ಸುಟ್ಟು ಹೋಗಿದ್ದರೂ ಒಂದು ವಾರದಿಂದ ದುರಸ್ತಿ ಮಾಡಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಮಸ್ಯೆ ತಕ್ಷಣ ಬಗೆಹರಿಸಬೇಕು ಎಂದು ರಸ್ತೆ ತಡೆ ಚಳವಳಿ ನಡೆಸಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಕಾಳಗಿ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ತಿಳಿಸಿದ್ದಾರೆ.


ವರದಿ : ಹಣಮಂತ ಕುಡಹಳ್ಳಿ

