ನರಗುಂದ: ರೈತನ ಮಗನಿಗೆ ಕನ್ಯೆ ನಿಶ್ಚಯವಾಗಿತ್ತು. ಮಗನ ಮದುವೆಗೆ ಹೆಣ್ಣು ಸಿಕ್ಕಳೆಂಬ ಖುಷಿಯಲ್ಲಿ ತಂದೆ- ತಾಯಿ ಹೊಸ ಬಟ್ಟೆ, ಚಿನ್ನಾಭರಣ (TALI) ಖರೀದಿಸಿದ್ದರು. ಬಂಧುಗಳು, ಆಪ್ತರನ್ನು ಆಹ್ವಾನಿಸಿ ಕೈ ಬಿಚ್ಚಿ ಖರ್ಚು ಮಾಡಿ ಕಲ್ಯಾಣ ಮಂಟಪ ಕಾಯ್ದಿರಿಸಿದ್ದರು.
ಭರ್ಜರಿ ಭೋಜನಕ್ಕೂ ಸಿದ್ಧತೆ ನಡೆದಿತ್ತು. ಅಷ್ಟರಲ್ಲೇ ಹುಡುಗಿ ಮದುವೆಗೆ ನಿರಾಕರಿಸಿದ ಸುದ್ದಿ ಬಂದಿತು. ಇದರಿಂದ ವರ ಹಾಗೂ ಆತನ ಹೆತ್ತವರ ತಲೆ ಮೇಲೆ ಆಕಾಶವೇ ಕಳಚಿ ಬಿದ್ದಂತಾಗಿತ್ತು.
ಆದರೆ, ಹೆತ್ತವರು ಹಾಗೂ ಗುರು- ಹಿರಿಯರ ಮಾತಿಗೆ ಬೆಲೆ ಕೊಟ್ಟ ಬೇರೆ ಯವತಿಯೊಬ್ಬಳು ಯುವಕನಿಗೆ ತಾಳಿ ಕಟ್ಟುವ ಸೌಭಾಗ್ಯ ಕರುಣಿಸಿ ಅಪರೂಪದ ಮದುವೆಗೆ ಸಾಕ್ಷಿಯಾಗಿದ್ದಾಳೆ.
ಪಟ್ಟಣದ ಕಸಬಾ ಬಡಾವಣೆಯ ನಿಂಗಪ್ಪ ಬಸಪ್ಪ ಸವದಿ ಎಂಬಾತನಿಗೆ ಬಾದಾಮಿ ತಾಲೂಕಿನ ಮಾಗನೂರ ಗ್ರಾಮದ ಯುವತಿಯೊಂದಿಗೆ ಭಾನುವಾರ ನಿಶ್ಚಿತಾರ್ಥ, ಸೋಮವಾರ ಮದುವೆ ನಿಗದಿಯಾಗಿತ್ತು. ಆದರೆ, ವೈಯಕ್ತಿಕ ಕಾರಣದ ನೆಪವೊಡ್ಡಿ ಶನಿವಾರ ರಾತ್ರಿಯೇ ಯುವತಿ ಮದುವೆಗೆ ನಿರಾಕರಿಸಿದ್ದಳು.
ಆಕೆಯ ಪಾಲಕರು ಸಹ ಲಿಖಿತ ಪತ್ರ ಬರೆದುಕೊಟ್ಟಿದ್ದರು. ಮಗನ ಮದುವೆ ನಿಂತೇ ಹೋಯಿತು ಎಂದು ವರನ ತಂದೆ- ತಾಯಿ ಚಿಂತಾಕ್ರಾಂತರಾಗಿ ಕುಳಿತಾಗ ಕಸಬಾ ಓಣಿಯ ಗುರು- ಹಿರಿಯರು ಒಂದಾಗಿ, 'ಮದುವೆ ನಿಲ್ಲಿಸುವುದು ಬೇಡ' ಎಂದು ವರನ ತಂದೆ-ತಾಯಿಗೆ ಧೈರ್ಯ ತುಂಬಿದರು.
ಕೂಡಲೇ ಬೇರೆ ಕನ್ಯೆಯ ಹುಡುಕಾಟ ಪ್ರಾರಂಭಿಸಿದರು. ಮೊಬೈಲ್‌ನಲ್ಲೇ ಬಂಧು- ಬಾಂಧವರನ್ನು ಸಂಪರ್ಕಿಸಿ, ಹುಡುಗಿಗಾಗಿ ಶೋಧ ನಡೆಸಿದರು. ಅಂತಿಮವಾಗಿ ರಾಮದುರ್ಗ ತಾಲೂಕಿನ ಕೆ. ಚಂದರಗಿಯ ಗೌರಿ ಮದುವೆಗೆ ಮನಸು ಮಾಡಿದ ಸಿಹಿ ಸುದ್ದಿ ಬಂದಿತು.
ಆಕೆಯ ತಂದೆ- ತಾಯಿಗೆ, ಮದುವೆಗೆ ಅಡ್ಡಿಯಾದ ವಾಸ್ತವ ಸ್ಥಿತಿಗತಿಗಳ ಬಗ್ಗೆ ಹಿರಿಯರು ಮನವರಿಕೆ ಮಾಡಿದಾಗ ಯುವತಿ ಹಾಗೂ ಆಕೆಯ ಪಾಲಕರು ಮದುವೆಗೆ ಖುಷಿಯಿಂದಲೇ ಒಪ್ಪಿಗೆ ಸೂಚಿಸಿದರು.
ಕೆಲವೇ ತಾಸುಗಳಲ್ಲಿ ಗುರು- ಹಿರಿಯರು ನವ ವಧುವಿನೊಂದಿಗೆ ಮದುವೆ ಮಂಟಪಕ್ಕೆ ಹಾಜರಾದರು. ನಿಗದಿಯಾದ ಶುಭ ಮುಹೂರ್ತದಲ್ಲೇ ನಿರ್ವಿಘ್ನವಾಗಿ ಮದುವೆಯನ್ನು ನೆರವೇರಿಸಲಾಯಿತು.
ಅಲ್ಲಿ ಸೇರಿದ್ದ ಹುಡುಗನ ಕಡೆಯವರೆಲ್ಲ ನಿಟ್ಟುಸಿರು ಬಿಟ್ಟರು.ಈ ಅಪರೂಪದ ಮದುವೆಗೆ ನರಗುಂದ ಹಾಗೂ ರಾಮದುರ್ಗದ ನೂರಾರು ಜನರು ಸಾಕ್ಷಿಯಾದರು. ಮಗನ ಮದುವೆ ಮಧ್ಯದಲ್ಲೇ ನಿಂತು ಹೋಯಿತು ಎಂಬ ದುಃಖ, ಅವಮಾನಕ್ಕೆ ಗುರಿಯಾಗಿದ್ದ ಹೆತ್ತವರ ಸಂತಸಕ್ಕೆ ಪಾರವೇ ಇರಲಿಲ್ಲ.


